Tuesday 31 March 2020

ಹತ್ತು ನೂರಾಗಿ, ನೂರು ಸಾವಿರವಾಗಿ... 'ಸತ್ಯದರ್ಶನದ ಪ್ರಕಾಶ' 'ಸಹಸ್ರದರ್ಶನ'ವಾದಾಗ...

                                                                     ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್



ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ, ಯೋಗೀಶ್ವರರ ತತ್ವವಿಚಾರ, ಮಂತ್ರಿಜನಕ್ಕೆ ಬುದ್ಧಿಗುಣ | ವಿರಹಿಗಳ ಶೃಂಗಾರ ವಿದ್ಯಾ ಪರಿಣತರಲಂಕಾರ ಕಾವ್ಯಕೆ ಗುರುವೆನಲು ರಚಿಸಿದ ಕುಮಾರ ವ್ಯಾಸ ಭಾರತವ ||

ಇದು ಕುಮಾರವ್ಯಾಸ ಭಾರತವನ್ನು ರಚಿಸಿದಾಗ ಹೇಳಿರುವ ಮಾತು. ಅಂದರೆ ರಾಜರುಗಳಿಗೆ ಇದು ವೀರವೆನಿಸಿದರೆ, ಬ್ರಾಹ್ಮಣರಿಗೆ ಪರವೇದದ ಸಾರವಾಗಿ ತೋರುತ್ತದೆ, ಯೋಗಿಗಳಿಗೆ-ಮುನಿಜನರಿಗೆ ತತ್ವವಿಚಾರವಾಗಿ ತೋರುತ್ತದೆ ಮತ್ತು ಮಂತ್ರಿಗಳಿಗೆ ರಾಜನೀತಿಯ ಬುದ್ಧಿಯನ್ನು ಹೇಳುತ್ತದೆ. ಇದಲ್ಲದೇ ವಿರಹಿಗಳಿಗೆ ಶೃಂಗಾರಕಾವ್ಯವೆನಿಸಿದರೆ ಪಂಡಿತರಿಗೆ ಅಲಂಕಾರವಾಗಿ ಕಾಣುತ್ತದೆ ಎಂಬ ಪ್ರೇರಣೆ ದೊರತದ್ದರಿಂದ ಕುಮಾರವ್ಯಾಸ ಭಾರತವನ್ನು ಬರೆದನೆಂದಿದ್ದಾನೆ.

ಹೇಗೆ ಕುಮಾರ ವ್ಯಾಸಭಾರತ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಆಯಾ ಪ್ರಮುಖ ವರ್ಗಗಳಿಗೆ ಅಗತ್ಯವಿರುವುದನ್ನು ತಿಳಿಸುವ ಕೃತಿಯಾಗಿದೆಯೋ, ಹಾಗೆಯೇ ಚಂದನ ವಾಹಿನಿಯಲ್ಲಿ 13 ವರ್ಷಗಳಿಂದ ಪ್ರಸಾರವಾಗುತ್ತಿದ್ದ, 1,111 ಸಂಚಿಕೆಗಳನ್ನು ಪೂರೈಸಿರುವ ಸತ್ಯದರ್ಶನವೂ ಸಹ ಎಲ್ಲರಿಗೂ ತಲುಪಿರುವ, ಜಿಜ್ಞಾಸುಗಳ ನೆಚ್ಚಿನ ಕಾರ್ಯಕ್ರಮವಾಗಿದೆ. ಏಕೆಂದರೆ 13 ವರ್ಷಗಳಿಂದ ಸತ್ಯದರ್ಶನ ಕಾರ್ಯಕ್ರಮದಲ್ಲಿ ಚರ್ಚೆಯಾಗದ ವಿಷಯವನ್ನು ಗುರುತಿಸುವುದೇ ಕಷ್ಟದ ಕೆಲಸ. ಸತ್ಯದರ್ಶನ ಕಾರ್ಯಕ್ರಮದಲ್ಲಿ  ಚರ್ಚೆಯಾದ ಪ್ರಶ್ನೋತ್ತರಗಳ ವ್ಯಾಪ್ತಿ ಅಂತಹದ್ದು!. ಎಲ್ಲಾ ವರ್ಗಗಳಿಗೂ, ಎಲ್ಲಾ ಶಾಖೆ, ಪಂಥಗಳ ಜಿಜ್ಞಾಸೆಗಳಿಗೂ ಉತ್ತರ ನೀಡಿ ಸತ್ಯದರ್ಶನವನ್ನು ಮಾಡಿಸಿದ್ದವು. ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಿದ್ಧಪುರುಷರು, ಅದ್ವೈತ, ಬೌದ್ಧ, ಜೈನ, ಸಿಖ್ ಪಂಥ, ದಿನ ನಿತ್ಯದ ಆಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಶೇಷ ಸಂದರ್ಭಗಳಲ್ಲಿ ಪಾಲನೆ ಮಾಡಬೇಕಾದ ಧರ್ಮ, ಪ್ರಶ್ನೋತ್ತರಗಳಿಗೆ ಮಿತಿ ಎಲ್ಲಿ? ಓಹ್ ಯಾವುದಿರಲಿಲ್ಲ ವಿದ್ವಾಂಸರಾದ ಡಾ.ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಡುತ್ತಿದ್ದ "ಸತ್ಯದರ್ಶನದ"ಲ್ಲಿ?

ಇಷ್ಟಕ್ಕೂ ಇಂದಿನ ಟಿಆರ್ ಪಿ ಪೈಪೋಟಿ, ಬಗೆಬಗೆಯ ಮನರಂಜನಾ ಕಾರ್ಯಕ್ರಮಗಳು, ವರ್ಷಗಟ್ಟಲೆ ನಡೆಯುವ ದಾರಾವಾಹಿಗಳ ಭರಾಟೆಯಲ್ಲಿ, ಸತ್ಯದರ್ಶನದಂತಹ  ಧಾರ್ಮಿಕ ವಿಷಯಗಳಂತಹ ಸೂಕ್ಷ್ಮ, ಅತಿ ಗಂಭೀರ ಚಿಂತಕರನ್ನೇ ಪ್ರಧಾನವಾಗಿಟ್ಟುಕೊಂಡು ನಡೆಯುವ ಕಾರ್ಯಕ್ರಮ ಸತತ 13 ವರ್ಷ  ದಾಖಲೆಯ 1,111 ಸಂಚಿಕೆಗಳನ್ನು ಪೂರೈಸಿರುವುದೇನು ಕಡಿಮೆ ಸಾಧನೆಯೇ? ಆ ಕಾರ್ಯಕ್ರಮದ ಹಿಂದಿನ ಪರಿಕಲ್ಪನೆ ಏನಾಗಿತ್ತು. ಅದರ ರೂವಾರಿಗಳಾರು? ರೂಪುರೇಷೆ ಸಿದ್ಧಗೊಂಡಿದ್ದು ಹೇಗೆ? ಈ ಬಗ್ಗೆ ಸತ್ಯದರ್ಶನ ಖ್ಯಾತಿಯ, ಕನ್ನಡಪ್ರಭ.ಕಾಂ ನ ರಾಮಾಯಣ ಅವಲೋಕನ ಅಂಕಣಕಾರರೂ ಆಗಿರುವ ಡಾ.ಪಾವಗಡ ಪ್ರಕಾಶ್ ರಾವ್ ಕನ್ನಡಪ್ರಭ.ಕಾಂ ಗೆ ಸಂದರ್ಶನ ನೀಡಿದ್ದಾರೆ. ಹಾಗಾದರೆ ಸುದೀರ್ಘ 1,111 ಸಂಚಿಕೆಗಳ ವಿಕ್ರಮವನ್ನು ಅವರಿಂದಲೇ ಕೇಳೋಣವೇ?

ಸತ್ಯದರ್ಶನ ಕಾರ್ಯಕ್ರದಮ ಪ್ರಾರಂಭಗೊಂಡಿದ್ದು ಹೇಗೆ? ಕಲ್ಪನೆ ಏನಿತ್ತು?

"ದೂರದರ್ಶನದ ನಿರ್ದೇಶಕರಾಗಿ 13 ವರ್ಷಗಳ ಹಿಂದೆ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ವರುಲು ಅವರು ತೆಲುಗಿನಲ್ಲಿ ಧರ್ಮ ಸಂದೇಹಾಲು(ಧರ್ಮ ಸಂದೇಹ) ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಹಾಗೆಯೇ ಕನ್ನಡದಲ್ಲಿ ಅಂತಹದ್ದೇ ಒಂದು ಕಾರ್ಯಕ್ರಮ ಮಾಡಬೇಕೇಂದುಕೊಂಡಿದ್ದೇನೆ. ನೀವು ಸಹಾಯ ಮಾಡುತ್ತೀರಾ ಎಂದು ಕೇಳಿದರು. ನನಗೆ ವಾಸ್ತವವಾಗಿ ಆ ಕಾರ್ಯಕ್ರಮ ಮಾಡೋದಕ್ಕೆ ಇಷ್ಟ ಇರಲಿಲ್ಲ. ನೂರು ಪ್ರಶ್ನೆ ಕೇಳುತ್ತಾರೆ. ನಾನು ಅದನ್ನಲ್ಲಾ ಎಲ್ಲಿ ಅಧ್ಯಯನ ಮಾಡಲಿ? ರಾಮಾಯಣದ್ದೋ, ಭಗವದ್ಗೀತೆಯದ್ದೋ ಉಪನ್ಯಾಸ ಕೊಡುತ್ತೇನೆ ಅದನ್ನ ಮಾಡಿಸಿ ಎಂದೆ. ಇಂತಹ ಕಾರ್ಯಕ್ರಮಗಳಿಂದ ಜನರಿಗೆ ಉಪಕಾರವಾಗುತ್ತೆ. ನೀವು ಮಾಡಿ ಎಂದು ಒತ್ತಾಯಿಸಿದರು. 13 ವರ್ಷಗಳ ಹಿಂದೆ ಜಿವಿ ಅಯ್ಯರ್ ಅವರು ಈ ಕಾರ್ಯಕ್ರಮದ ಮೊಟ್ಟ ಮೊದಲನೆಯ ಉದ್ಘಾಟನಾ ಭಾಷಣ ಮಾಡಿದ್ದರು. ಸತ್ಯದರ್ಶನ ಕಾರ್ಯಕ್ರಮ ಪ್ರಾರಂಭವಾದದ್ದು ಹೀಗೆ.

ಆಗೆಲ್ಲಾ  14 ಸಂಚಿಕೆಗಳ ಮಿತಿ ಇತ್ತು. ಆದರೆ 108 ಕ್ಕೆ ನಿಲ್ಲಿಸಬೇಕು ಎಂದುಕೊಂಡಿದ್ದೆವು. 108 ಸಂಚಿಕೆ ಪೂರೈಸಿದ್ದರ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಬಂದಿದ್ದರು. ಅದೇ ಕಾರ್ಯಕ್ರಮದಲ್ಲಿ ಸತ್ಯದರ್ಶನ ಮುಕ್ತಾಯವಾಗುತ್ತೆ ಎಂದು ಹೇಳಿದ್ದೆವು. ಆದರೆ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಮುಂದುವರೆಸಬೇಕೆಂದು ಒತ್ತಾಯಿಸಿದರು. ಈಗ ಮುಂದುವರೆದು 13 ವರ್ಷಕ್ಕೆ ಬಂದು ನಿಂತಿದೆ.

ಸತ್ಯದರ್ಶನಕ್ಕೆ ಬರುತ್ತಿದ್ದ ಪತ್ರಗಳು ಅದರ ಆಯ್ಕೆ ಬಗ್ಗೆ ಒಂದಷ್ಟು ಮಾಹಿತಿ...?

"ಮೊದಲ ಹಂತದಲ್ಲಿ ಒಂದಷ್ಟು ಪತ್ರಗಳನ್ನು ಆಯ್ಕೆ ಮಾಡುತ್ತಿದ್ದರು. ಆ ನಂತರ ನನಗೆ ಒಂದಷ್ಟು ಕೊಡುತ್ತಿದ್ದರು. ನಾನು ಸರ್ವಜ್ಞ ಅಲ್ಲ. ಏನಾದರೂ ಉತ್ತರ ಕೊಡಬೇಕಿದ್ರೆ, ಅದು ಅಧಿಕೃತವಾಗಿರಬೇಕು. ಸತ್ಯವಾಗಿರಬೇಕು. ಹಾಗಿರಬೇಕಾದರೆ ಅಧ್ಯಯನ ಇರಬೇಕು. ಅದರ ಮೂಲದಲ್ಲಿ, ತಪಸ್ಸು ಮಾಡಬೇಕು. ಬಹಳ ಜನ ತಪ್ಪು ತಿಳಿದಿದ್ದಾರೆ. ಪ್ರಕಾಶ್ ರಾಯರು ಪ್ರಶ್ನೆ ಕೇಳುತ್ತಿದ್ದಂತೆಯೇ ಉತ್ತರ ಹೇಳಿಬಿಡುತ್ತಾರೆ ಅಂತ ಅವೆಲ್ಲಾ ಸುಳ್ಳು. ನಾನೂ
ವಿಚಾರಗಳ ಬಗ್ಗೆ ಅಧ್ಯಯನ ಮಾಡುತ್ತೇನೆ. ಅಧ್ಯಯನ ಮಾಡಿ, ಸೂಕ್ತ ಅಂತ ಅನ್ನಿಸಿದ್ದನ್ನ ಉತ್ತರ ಕೊಡುತ್ತೇನೆ. ಪ್ರಶ್ನೆಗಳು ಸಾಕಷ್ಟು ಬರುತ್ತೆ. ಆಯ್ಕೆ ಆಗುತ್ತೆ. ಅಧ್ಯಯನ ಆಗುತ್ತೆ. ಆ ನಂತರವೇ ಉತ್ತರ.

ಸತ್ಯದರ್ಶನ ಕಾರ್ಯಕ್ರಮದಲ್ಲಿ ರಾಮಾಯಣದಿಂದ ಹಿಡಿದು ಗೋಂದಾವಳಿ ಮಹಾರಾಜರವರೆಗೆ ಎಲ್ಲಾ ವಿಷಯಗಳೂ ಚರ್ಚೆಯಾಗಿವೆ, ಹೇಳದೇ ಇರುವುದೇನಾದರೂ ಇದೆಯೇ?

108 ಸಂಚಿಕೆಗಳಾದ ನಂತರ ತಯಾರಿಸಿದ ಪಟ್ಟಿಯಲ್ಲಿ ಅದ್ವೈತ, ಬೌದ್ಧ, ಜೈನ, ವೀರಶೈವ, ವಿಶಿಷ್ಠಾದ್ವೈತ, ದ್ವೈತ, ಸಿಖ್ ಪಂಥಗಳಿದ್ದವು. ದರ್ಶನಗಳ ಪೈಕಿ ಸಾಂಖ್ಯ, ಕಣಾದರ ದರ್ಶನ, ಗೌತಮರ ನ್ಯಾಯ, ಯೋಗಸೂತ್ರ, ಪೂರ್ವ ಮೀಮಾಂಸೆ ಇತ್ತು. ಹಲವಾರು ದ್ವೈತ ಮುಖಂಡರು ನಮ್ಮ ಚಂದನಕ್ಕೆ ಕಾಗದ ಬರೆದು, ಪ್ರಕಾಶ್ ರಾಯರು ದ್ವೈತದ ಬಗ್ಗೆ ಮಾತನಾಡಬಾರದು ಎಂದರೆ ಅದ್ಯಾಕೆ ಗೊತ್ತಿಲ್ಲ ಅವರಿಗೆ ಬಹುಶಃ ನಾನು ಅದರ ಬಗ್ಗೆ ದೋಷಾರೋಪಣೆ ಮಾಡುತ್ತೀನಿ ಎನಿಸಿರಬೇಕು. ಆದರೆ ನಾನು ಹಾಗೆ ಮಾಡುತ್ತಲೂ ಇರಲಿಲ್ಲ.  ನಮಗೆ ತ್ರಯಾಚಾರ್ಯರೂ ಸಮಾನರೇ. ಆದರೆ ಮಾತನಾಡಬೇಕು ಅಂತ ಅಂದುಕೊಂಡಿದ್ದ ಮತ್ತೊಂದು ಆಗಿಲ್ಲ. ಅದೇನು ಅಂದ್ರೆ ಕನ್ನಡ ಸಾಹಿತ್ಯ. 1,100 ವರ್ಷಗಳವರೆಗಿನ ಕನ್ನಡ ಸಾಹಿತ್ಯ ಚರಿತ್ರೆ ಇದೆ ನಮ್ಮಲ್ಲಿ. ನನಗೆ ಪಂಪನಿಂದ ಕುವೆಂಪು ವರೆಗೆ ಒಂದು 500 ಸಂಚಿಕೆಗಳನ್ನ ಮಾಡಬೇಕು ಎಂಬ ಇಷ್ಟ ಇತ್ತು. ಕನ್ನಡ ಸಾಹಿತ್ಯದ ದಿಗ್ದರ್ಶನವನ್ನು ಮಾಡಬೇಕು ಎಂಬ ಇಷ್ಟವಿತ್ತು. ಪಂಪನಿಂದ ಕುವೆಂಪು ವರೆಗೆ ಮಾತನಾಡಿ ದಾಖಲು ಮಾಡಬೇಕು ಅಂದುಕೊಂಡಿದ್ದಿದ್ದೆ. ಹಲ್ಮಿಡಿ ಶಾಸನದಿಂದ ಆರಂಭವಾಗಿ, ನವ್ಯ ಸಾಹಿತ್ಯದ ವರೆಗೂ ಲಭ್ಯವಿರುವ ಅಂಶಗಳನ್ನು ಯಾವ ಕನ್ನಡ ವಾಹಿನಿಯೂ ಬಳಸಿಕೊಂಡಿಲ್ಲ. ಅದನ್ನು ಮಾಡಬೇಕು ಎಂದುಕೊಂಡಿದ್ದೆ. ಈಗಲೂ ಆಸಕ್ತ ಪ್ರಾಯೋಜಕರಿದ್ದರೆ ಮಾಡುವ ಮನಸ್ಸಿದೆ.

ಉದ್ವಿಗ್ನತೆಯಿಂದ ವಿರೋಧ ವ್ಯಕ್ತಪಡಿಸುತ್ತೇವೆ, ರೋಚಕತೆಯ ಬೆನ್ನಟ್ಟಿ ಮೂಲತತ್ವವನ್ನು ಮರೆಯುತ್ತಿದ್ದೇವೆ, ಈ ನಿಟ್ಟಿನಲ್ಲಿ ಸತ್ಯದರ್ಶನದಂತಹ ಕಾರ್ಯಕ್ರಮಗಳ ಪಾತ್ರವೇನು?

ನಾನು ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇನೆ. ಉದಾಹರಣೆ ಹೇಳುತ್ತೇನೆ. ನೀವು ಜಿಜ್ಞಾಸು ಆದರೆ ತಪ್ಪಿಲ್ಲ. ಸಂದೇಹ ಪಟ್ಟರೆ ತಪ್ಪಿಲ್ಲ.ಸಾಧಾರವಾಗಿ ವಿರೋಧಿಸಿದರೆ ತಪ್ಪಿಲ್ಲ. ನಂಬಿಕೆಯೇ ಇಲ್ಲದೇ ಇದ್ದರೆ ತಪ್ಪಿಲ್ಲ. ಆದರೆ ಕೇವಲ ವಿರೋಧಿಸಬೇಕು ಅನ್ನುವ ಕಾರಣದಿಂದ ದೇವರುಗಳ ಬಗ್ಗೆ ವಿರೋಧಿಸುವುದು ಆ ಒಂದು ಕಾರಣದಿಂದ ವಿರೋಧಿಸುವುದು ಇದನ್ನು ಖಂಡಿಸುತ್ತಾ ಬಂದಿದ್ದೇನೆ. ವಿರೋಧಿಸುವಂತಿದ್ದರೆ, ಸಾಧಾರವಾಗಿ ವಿರೋಧಿಸಿ. ಬೇರೆ ವಿದ್ವಾಂಸರು ಏನು ಹೇಳಿದ್ದಾರೆ, ಅದರ ಬಗ್ಗೆ ನನ್ನ ಜ್ಞಾನದ ಮಿತಿಯೇನು ಎಂಬುದನ್ನೇನೂ ಅರಿಯದೇ ಸುಮ್ಮನೇ ಭಗವದ್ಗೀತೆಯಂತಹ ಗ್ರಂಥಗಳನ್ನು ಸುಡುತ್ತೇನೆ ಎನ್ನುವುದು ಸರಿಯಲ್ಲ. ಅಂತೆಯೇ ಮೂಲ ಗ್ರಂಥಗಳ ರಚನೆಯಲ್ಲಿ ಇಲ್ಲದ ಅಂಶಗಳನ್ನು, ಮತ್ತೆ ಯಾವುದೋ ಗ್ರಂಥಗಳಿಂದ ಹೆಕ್ಕಿ ಸುಳ್ಳು ಮಾಹಿತಿ ನೀಡಿ ಸ್ಥಾಪಿಸುವುದು ಸರಿಯಲ್ಲ. ನಮಗೆ ವಾಲ್ಮೀಕಿ ವಿರಚಿತ ರಾಮಾಯಣ ಮಾನ್ಯವೇ ಹೊರತು, ಬೇರೆ ಬೇರೆ ರಾಮಾಯಣಗಳು ನಮಗೆ ಮಾನ್ಯವಲ್ಲ.

ಅಗಸ್ತ್ಯರ ಆತಿಥ್ಯದಲ್ಲಿದ್ದ ಶ್ರೀರಾಮರು ಗೋಮಾಂಸ ಸೇವಿಸಿದರೆಂಬುದಾಗಲೀ ಅಥವಾ ಇಂತಹ ಯಾವುದೇ ಅಂಶಗಳು ಮೂಲದಲ್ಲಿ ಇಲ್ಲ. ನನಗೆ ಮಾಂಸದ ಊಟದ ಬಗ್ಗೆ ವಿರೋಧವಿಲ್ಲ ಇಂತಹದ್ದೇ ವಿಷಯಗಳನ್ನು ಸತ್ಯದರ್ಶನ ಮಾಡಿಸಬೇಕು.  ಆ ರೀತಿಯ ಸತ್ಯದರ್ಶನ ನನಗೆ 100 ಕ್ಕೆ 90 ಭಾಗ ಸಂತೋಷ ನೀಡಿದೆ. ಸಾಕಷ್ಟು ಪ್ರಚಾರ, ಸಂಭಾವನೆಯೂ ದೊರೆತಿದೆ. ದೂರದರ್ಶನದಲ್ಲಿ ಸತ್ಯದರ್ಶನ ಪ್ರಚಾರವಾಗುತ್ತಿದ್ದಂತೆಯೆ ಹೊರಗಡೆ ಉಪನ್ಯಾಸಕ್ಕೂ ಹೆಚ್ಚು ಮಾನ್ಯತೆ ಸಿಕ್ಕಿತು. ಇದು ದೂರದರ್ಶನದಿಂದ ನನಗೆ ಆದ ಉಪಕಾರ. ಈ ಉಪಕಾರಕ್ಕಾಗಿ ಸತ್ಯದರ್ಶನವನ್ನು ಸೃಷ್ಟಿಸಿದ ವೆಂಕಟೇಶ್ವರುಲು ಅವರನ್ನು ನೆನಪಿಸಿಕೊಂಡು ಇಲ್ಲಿಯವರೆಗೆ ಬೆಳೆಸಿಕೊಂಡು ಬಂದ ಮಹೇಶ್ ಜೋಷಿಗಳಿಗೆ ಕೃತಜ್ಞನಾಗಿದ್ದೇನೆ.

13 ವರ್ಷ ವಿವಾದ ರಹಿತವಾಗಿ ನಡೆಸಿದರಲ್ಲ ಅದು ಹೇಗೆ ಸಾಧ್ಯವಾಯಿತು?

ಅದು ಸಾಧ್ಯವಾಗಿದ್ದರೆ ನಾನು ಯಾವುದೇ ಇಸಂ ಗೆ ಅಂಟಿಕೊಳ್ಳದೇ ಇರುವುದು ಪ್ರಧಾನವಾದ ಕಾರಣ. ನಾನು ಶುದ್ಧ ಅದ್ವೈತಿಯಾದರೂ ಭಾರತದಲ್ಲಿರುವ ಎಲ್ಲ ಧರ್ಮವನ್ನೂ ತಿರಸ್ಕರಿಸಿ ಅದ್ವೈತವನ್ನು ಮಾತ್ರ ಇಟ್ಟುಕೊಳ್ಳುವೆ ಎಂದಲ್ಲ. ವೀರಶೈವ, ಬೌದ್ಧ, ಜೈನ, ನಾಥ ಪಂಥದ ಬಗ್ಗೆ ಮಾತನಾಡುತ್ತೇನೆ. ಒಟ್ಟಾರೆ 13 ವರ್ಷಗಳ ವರೆಗೆ ಯಾವುದೇ ಇಸಂ ಗಳಿಗೆ ಅಂಟಿಕೊಳ್ಳದೇ ನನ್ನ ಅದ್ವೈತವನ್ನು ಮಂಡನೆ ಮಾಡುತ್ತಾ. ಉಳಿದೆಲ್ಲವಕ್ಕೂ ಮರ್ಯಾದೆ ನೀಡಿದ್ದರಿಂದ ವಿವಾದ ರಹಿತವಾಗಿ ನಡೆಸಿಕೊಡಲು ಸಾಧ್ಯವಾಗಿದೆ ಎನಿಸುತ್ತದೆ.

ಸತ್ಯದರ್ಶನದ ಸಂಪುಟಗಳ ಬಗ್ಗೆ ಹೇಳುವಿರಾ?

ಈಗಾಗಲೇ ಎರಡು ಸಂಪುಟಗಳು ಪ್ರಕಟವಾಗಿದೆ (ಸತ್ಯಪ್ರಕಾಶ-1, 2) 3 ನೇ ಸಂಪುಟ ಪ್ರಕಟವಾಗಲಿದೆ. ಶ್ರದ್ಧೆಗಳು ನಶಿಸುತ್ತಿದ್ದು, ಅದನ್ನು ಪುನಶ್ಚೇತನಗೊಳಿಸುವ ಬಗ್ಗೆ ಭಾರತೀಯ ವಿದ್ಯಾಭವನದಲ್ಲಿ ಡಾ.ವಿರೇಂದ್ರ ಹೆಗಡೆ ಅವರು ಆಯೋಜಿಸಿದ್ದ ಶ್ರದ್ಧಾ ಪುನಶ್ಚೇತನ ಎಂಬ ಸಭೆಯಲ್ಲಿ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ವಿಶೇಷ ಸಂಚಿಕೆ ಮಾಡಿದರೆ. 2018 ರ ಮಾರ್ಚ್ ನಲ್ಲಿ ನಡೆಯಲಿರುವ ವಿಶೇಷ ಸಮ್ಮೇಳನದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮ್ಮೇಳನದಲ್ಲಿ ಪ್ರಶ್ನೋತ್ತರ ಕಲಾಪ ನಡೆಸುವಂತೆ ಸಲಹೆ ನೀಡಿದ್ದೇನೆ, ಎಲ್ಲರೂ ಎಲ್ಲಾ ಧರ್ಮ, ಶ್ರದ್ಧೆಗಳ ಬಗ್ಗೆ ಅಧ್ಯಯನ ಮಾಡಿರಬೇಕು ಹಾಗಾದಲ್ಲಿ ಮಾತ್ರ ಧರ್ಮಕ್ಕೆ ಸಂಬಂಧಿಸಿದ ಯಾವುದೆ ಪ್ರಶ್ನೆಗಳನ್ನು ಸಮರ್ಥವಾಗಿ ಎದುರಿಸಬಹುದು.

ಸತ್ಯದರ್ಶನವನ್ನು ಮುಗಿಸುವ ಅನಿವಾರ್ಯತೆ ಇತ್ತಾ? ಮುಂದುವರೆಸಬಹುದಿತ್ತಲ್ಲಾ...

ಮುಂದುವರೆಸಬಹುದಿತ್ತು... ಘೋಷಣೆ ಮಾಡಿ ಮುಕ್ತಾಯಗೊಳ್ಳಲು ಇನ್ನೊಂದು ತಿಂಗಳಿದೆ ಎನ್ನಬೇಕಾದರೆ ಅದರ ನಿರ್ಮಾಪಕರು ಸುಧಾಕರ್ ಪ್ರಿಯರಿಗೆ ಒದ್ದಾಟ ಪ್ರಾರಂಭವಾಯಿತು. ಮುಕ್ತಾಯ ಮಾಡುತ್ತಿದ್ದೇನೆ ಎಂದು ಹೇಳಬೇಡಿ ಎಂದರು. ಹೇಳಿದರೆ ಜನ ಪ್ರಶ್ನೆ ಕೇಳಲು ಪ್ರಾರಂಭಿಸುತ್ತಾರೆ ಎಂದರು. ಆ ಹಿನ್ನೆಲೆಯಲ್ಲಿ ಮಹೇಶ್ ಜೋಷಿಗಳೂ ಇದೇ ಪ್ರಶ್ನೆ ಕೇಳಿದ್ದರು. ಯಾಕೆ ನಿಲ್ಲಿಸಬೇಕು ಅಂದುಕೊಂಡಿದ್ದೀರಿ? ಅವರಿಗೆ ಕೊಟ್ಟ ಉತ್ತರವನ್ನು ನಾನು ನಿಮಗೂ ಕೊಡಬೇಕಿದೆ. ಸತ್ಯದರ್ಶನ ಕಾರ್ಯಕ್ರಮ ಮುಗಿಸುವುದು ಅನಿವಾರ್ಯತೆ ಎಂದು ಹೇಳುವುದಿಲ್ಲ. ಆದರೆ 13 ವರ್ಷಗಳು ಪುಟ್ಟ ಸಮಯವಲ್ಲ. 13 ವರ್ಷದಿಂದ ಪ್ರೇಕ್ಷಕರು ಇದೇ ಬಿಳಿ ಗಡ್ಡ ನೋಡುತ್ತಿದ್ದಾರೆ.  13 ವರ್ಷಗಳು ಕೇವಲ ಧರ್ಮಕ್ಕೆ ಸಂಬಂಧಿಸಿದ್ದು ಮಾತ್ರ ಚರ್ಚೆಯಾಯಿತು. ಹೀಗಾಗಿ ನಮ್ಮ ಜೀವನದಲ್ಲಿ ಧಾರ್ಮಿಕ ವಿಷಯಗಳಿಗೆ ಜಾಗ ಎಷ್ಟಿದೆ ಎಂಬುದನ್ನು ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 13 ವರ್ಷಗಳು ಮಾಡಿದ್ದು ಸಾಕು ಎನಿಸಿತು. ಎಷ್ಟು ವರ್ಷ ಅಂತ ಒಂದೇ ಕಾರ್ಯಕ್ರಮ ನಡೆಸುವುದು? ಪ್ರೇಕ್ಷಕರಿಗೆ ಸಹನೆ ಎಷ್ಟಿದೆ?. ಅವರು ಸಾಕು ಎನ್ನುವುದಕ್ಕೆ ಮುನ್ನ ನಾವೇ ನಿಲ್ಲಿಸಲು ತೀರ್ಮಾನಿಸಿದ್ದೇವೆ. ಕನ್ನಡದ ಸಾಹಿತ್ಯದ ಬಗ್ಗೆ ಮುಂದೆ ಕಾರ್ಯಕ್ರಮ ಮಾಡುವ ಮನಸ್ಸಿದೆ. ಸೂಕ್ತ ವೇದಿಕೆ ಸಿಕ್ಕಲ್ಲಿ ಪ್ರಾರಂಭಿಸುತ್ತೇನೆ.


Thursday 16 May 2019

ಜೀವನ್ಮುಕ್ತ ಸಂತ: ಶೃಂಗೇರಿ ಶಿವಗಂಗಾ ಪೀಠದ ಶ್ರೀಸಚ್ಚಿದಾನಂದ ಭಾರತೀ ಸ್ವಾಮಿಗಳು



ಬೆಂಗಳೂರಿನಿಂದ ಸುಮಾರು 54 ಕಿಮಿ ದೂರದಲ್ಲಿ ಬೃಹದಾಕಾರದ ಬೆಟ್ಟದಿಂದ ಸುತ್ತುವರೆದ ಪ್ರದೇಶ. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು ಶಿವನ ಸಾನ್ನಿಧ್ಯದಲ್ಲಿ ಅಗಸ್ತ್ಯರು ಸ್ಥಾಪಿಸಿದ ಗಂಗೆ ಇರುವ ಪವಿತ್ರ ಕ್ಷೇತ್ರ. ಯೋಗಿಗಳ ತಪಸ್ಸಿಗೆ ಹೇಳಿ ಮಾಡಿಸಿದ ಸ್ಥಳ, ವಾಹನ ಸಂಚಾರವೇ ಇರದ ಕಾಲಘಟ್ಟ, ಆಗಲೇ ನೆಲಮಂಗಲದ ಬಳಿ ಇರುವ ಶಿವಗಂಗೆಯಲ್ಲಿ ಪ್ರಾರಂಭವಾಗಿದ್ದು ಶೃಂಗೇರಿಯ ಶಾಖಾ ಮಠವಾದ ಶೃಂಗೇರಿ ಶಿವಗಂಗಾ ಮಠ.

ಶೃಂಗೇರಿ ಶಿವಗಂಗಾ ಮಠ ಸ್ಥಾಪನೆಯಾಗಿದ್ದು, 1599ರಿಂದ 1622ರವರೆಗೆ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶ್ರೀ ಅಭಿನವ ನರಸಿಂಹ ಭಾರತೀ ಸ್ವಾಮಿಗಳವರ ಕಾಲದಲ್ಲಿ. ಜಗದ್ಗುರುಗಳು 1615ರಲ್ಲಿ ಸಂಚಾರ ಕೈಗೊಂಡಿದ್ದಾಗ ಮೈಸೂರು ಅರಸರಾಗಿದ್ದ ರಾಜ ಒಡೆಯರು, ಮೈಸೂರು ಸಂಸ್ಥಾನದಲ್ಲಿ ಶೃಂಗೇರಿಯ ಒಂದು ಶಾಖಾಮಠವನ್ನು ಸ್ಥಾಪಿಸಬೇಕೆಂದು ಜಗದ್ಗುರುಗಳಲ್ಲಿ ಪ್ರಾರ್ಥಿಸಿದ್ದರು. ಮಹಾರಾಜರ ಪ್ರಾರ್ಥನೆಯನ್ನು ಒಪ್ಪಿದ ಗುರುಗಳು ತಮ್ಮ ಪರಿವಾರದಲ್ಲಿದ್ದ ಶ್ರೀ ಶಂಕರ ಭಾರತಿಗಳೆಂಬ ಸಂನ್ಯಾಸಿಗಳನ್ನು ರಾಜರೊಂದಿಗೆ ಕಳಿಸಿದರು. ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದು,ನಾಲ್ಕು ದಿಕ್ಕಿನಿಂದಲೂ ನಾಲ್ಕು ಆಕಾರಗಳಾಗಿ(ಗಣೇಶ, ಲಿಂಗ, ನಂದಿ, ಸರ್ಪ) ಕಾಣುವ ಬೆಟ್ಟ ಇರುವ ಶಿವಗಂಗಾ ಕ್ಷೇತ್ರದಲ್ಲಿ ಶಂಕರ ಭಾರತಿ ಸ್ವಾಮಿಗಳು 1656ರಲ್ಲಿ ವಿದ್ಯಾಶಂಕರ ಎಂಬ ಯೋಗಪಟ್ಟ ನೀಡಿ ತಮ್ಮ ಶಿಷ್ಯರೊಬ್ಬರನ್ನು ಈ ಮಠದ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದರು.ಅದಕ್ಕಾಗಿಯೇ ಶೃಂಗೇರಿ ಪರಂಪರೆಯಲ್ಲಿ ಶೃಂಗೇರಿ ಶಿವಗಂಗಾ ಪೀಠಕ್ಕೂ ವಿಶೇಷ ಸ್ಥಾನಮಾನಗಳಿವೆ. ಇತ್ತೀಚೆಗಷ್ಟೇ ನಡೆದ ಶೃಂಗೇರಿ ಮಹಾಸ್ವಾಮಿಗಳವರ ಶಿಷ್ಯ ಸ್ವೀಕಾರ ಸಮಾರಂಭವೂ ಸೇರಿದಂತೆ ಈ ಹಿಂದೆ ಅದೆಷ್ಟೋ ಸಂದರ್ಭದಲ್ಲಿ ಇದು ಪ್ರಕಟವೂ ಆಗಿದೆ. ಶೃಂಗೇರಿ ಶಾಖಾ ಮಠದ ಈ ಗುರುಪರಂಪರೆಯಲ್ಲಿ 18ನೇ ಪೀಠಾಧಿಪತಿಗಳಾಗಿ ರಾರಾಜಿಸಿದವರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು.

ಸೀತಾರಾಮ ಶರ್ಮ  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪೂರ್ವಾಶ್ರಮದ ಹೆಸರು. 1953ರ ವೈಶಾಖ ಶುದ್ಧ ದ್ವಾದಶಿಯಂದು ವೇದ ಬ್ರಹ್ಮ ವೆಂಕಟಸುಬ್ಬಯ್ಯ, ಸುಬ್ಬಲಕ್ಷಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಶ್ರೀಗಳು ಪೂರ್ವಾಶ್ರಮದಲ್ಲಿ ಬಿ.ಎಸ್ಸಿ, ಎಲ್.ಎಲ್.ಬಿ ಬಿ.ಐ.ಎಂ.ಎಸ್(ದೆಹಲಿ ವಿಶ್ವವಿದ್ಯಾನಿಲಯ) ಪದವೀಧರರು. ಪುಂಖಾನುಪುಂಖ ವಿಷಯೇಕ್ಷಣ ತತ್ಪರೋಪಿ ಬ್ರಹ್ಮಾವಲೋಕನ ಧಿಯಂ ನ ಜಹಾತಿ ಯೋಗಿ ( ಲೌಕಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದರೂ ಜ್ಞಾನಿಗಳು ತಮ್ಮ ಲಕ್ಷ್ಯವನ್ನು ಸದಾ ಬ್ರಹ್ಮದ ಮೇಲೆಯೇ ಸ್ಥಿರೀಕರಿಸಿರುತ್ತಾರೆ) ಎಂಬಂತೆ ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರಾದರೂ ಅವರ ಲಕ್ಷ್ಯ ಇದ್ದದ್ದು ಮಾತ್ರ ಬ್ರಹ್ಮಜ್ನಾನಕ್ಕೆ ರಾಜಮಾರ್ಗವಾದ ಆಧ್ಯಾತ್ಮ ಚಿಂತನೆಯಲ್ಲಿ. ಸನಾತನ ಧರ್ಮದ ಆಚರಣೆ ಬಗ್ಗೆ ಅತೀವ ಆಸಕ್ತಿ, ವೇದಗಳ ಬಗ್ಗೆ ಅಚಲ ನಂಬಿಕೆ, ಶ್ರದ್ಧೆ, ಭಕ್ತಿ ಶ್ರೀಗಳವರಿಗೆ ವಿದ್ಯಾರ್ಥಿ ಜೀವನದಿಂದಲೂ ಕೌಟುಂಬಿಕ ವಾತಾವರಣದಲ್ಲೇ ಲಭಿಸಿತ್ತು. ಬಿ.ಎಸ್ಸಿ, ಎಲ್.ಎಲ್.ಬಿ ಹಾಗೂ ದೆಹಲಿಯ ವಿಶ್ವವಿದ್ಯಾನಿಲಯದಿಂದ ಬಿ.ಐ.ಎಂ.ಎಸ್ ಪದವಿ ಪಡೆದ ನಂತರ ಕೆಲಕಾಲ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಕಂಪನಿಯಲ್ಲಿ ಕೆಲಕಾಲ ವೃತ್ತಿ ಜೀವನ ನಡೆಸಿದರು. ಈ ಸಂದರ್ಭದಲ್ಲೇ ಗುರುಗಳಿಗೆ ಶೃಂಗೇರಿ ಶಿವಗಂಗಾ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಸಂಶ್ರಯ ಪ್ರಾಪ್ತವಾಗಿತ್ತು.ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಶ್ರೀಗಳ ಮನಸ್ಸು ವೇದಾಧ್ಯಯನಕ್ಕಾಗಿ ಶೃಂಗೇರಿಯ ಶಾರದಾಂಬೆಯ ಸಾನ್ನಿಧ್ಯದತ್ತ ಹೊರಳಿತ್ತು. ತಂದೆ ತಾಯಿಯರ ಅನುಮತಿ ಪಡೆದು, ಶೃಂಗೇರಿಯಲ್ಲಿ ವೇದಾಧ್ಯಯನ ಮುಂದುವರೆದಿತ್ತು. ಇತ್ತ ಶಿವಗಂಗಾ ಶೃಂಗೇರಿ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರ ಆರೋಗ್ಯ ಹದಗೆಟ್ಟಿತ್ತು, ಪೀಠಕ್ಕೆ ಉತ್ತರಾಧಿಕಾರಿ ನೇಮಕ ತುರ್ತಾಗಿ ನಡೆಯಬೇಕಿತ್ತು. ಶೃಂಗೇರಿಯಲ್ಲಿ ವೇದಾಧ್ಯಯನ ಮಾಡುತ್ತಿದ್ದ ಸೀತಾರಾಮ ಶರ್ಮರೇ ತಮ್ಮ ಉತ್ತರಾಧಿಕಾರಿಗಳೆಂದು ವಿಶ್ವೇಶ್ವರಾನಂದ ಭಾರತೀ ಸ್ವಾಮಿಗಳವರು ನಿಶ್ಚಯಿಸಿದ್ದರು.ಹಿರಿಯ ಶ್ರೀಗಳ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಸೀತಾರಾಮ ಶರ್ಮರನ್ನು ಬೆಂಗಳೂರಿಗೆ ಕರೆಸಲಾಯಿತು. 7-08-1982, ಆಶ್ವಯುಜ ಶುದ್ಧ ಪಂಚಮಿಯಂದು ಆತುರದ ಸಂನ್ಯಾಸ ನೀಡಿ ಸಚ್ಚಿದಾನಂದ ಭಾರತೀ ಸ್ವಾಮಿಗಳೆಂಬ ಯೋಗಪಟ್ಟವನ್ನೂ ನೀಡಲಾಯಿತು. ಕ್ರಮ ಸನ್ಯಾಸ ಸ್ವೀಕಾರದ ನಂತರ 26-10-1982ರಲ್ಲಿ ಶ್ರೀಗಳು ಶೃಂಗೇರಿ ಶಾಖಾ ಮಠ ಶಿವಗಂಗೆಯ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತಗೊಂಡರು. ನಂತರ  31 ವರ್ಷಗಳ ಕಾಲ ಶಿವಗಂಗಾ ಪೀಠವನ್ನಲಂಕರಿಸಿದ್ದರು.


(ವಿಡಿಯೋ ಕೃಪೆ:  sri sacchidananda bharathi mahaswamiji  facebook page


ಸಂನ್ಯಾಸ ಧರ್ಮಕ್ಕೆ ಅನ್ವರ್ಥ ನಾಮದಂತಿದ್ದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಶೃಂಗೇರಿಯ 34ನೇ ಪೀಠಾಧಿಪತಿಗಳಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರಿಂದ ಪ್ರಭಾವಿತರಾಗಿದ್ದರು. ಶ್ರೀರಾಮ ಅವರ ಆರಾಧ್ಯ ದೈವ. ಗುರುಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳವರು ಉಪದೇಶ ನೀಡಿದ್ದರು ಎಂಬುದು ವಿಶೇಷ. ಅದರ ಫಲವೆಂಬಂತೆ ಸಂನ್ಯಾಸಾಶ್ರಮ ಸ್ವೀಕರಿಸಿದ ನಂತರ ಸಚ್ಚಿದಾನಂದ ಭಾರತೀ ಸ್ವಾಮಿಗಳವರು, ತಪಸ್ಸು ವೈರಾಗ್ಯ, ಧರ್ಮಾಚರಣೆ, ಗುರುಭಕ್ತಿ, ಭಕ್ತಜನರನ್ನು ಆಶೀರ್ವದಿಸುವ ವಿಷಯದಲ್ಲಿ, ಅಷ್ಟೇ ಏಕೆ ಸಂನ್ಯಾಸಾಶ್ರಮ ಸ್ವೀಕಾರದಿಂದ ವಿದೇಹ ಮುಕ್ತಿವರೆಗೂ ಚಂದ್ರಶೇಖರ ಭಾರತೀ ಸ್ವಾಮಿಗಳ ಪ್ರತಿರೂಪದಂತಿದ್ದರು. ಚಂದ್ರಶೇಖರ ಭಾರತೀ ಸ್ವಾಮಿಗಳವರ ಜೀವನ ಚರಿತ್ರೆಯನ್ನು ಓದಿ, ಶಿವಗಂಗಾ ಗುರುಗಳ ದರ್ಶನ ಪಡೆದ ಅದೆಷ್ಟೋ ಭಕ್ತರಿಗೆ ಸಚ್ಚಿದಾನಂದ ಭಾರತೀ ಸ್ವಾಮಿಗಳವರಲ್ಲಿ ಚಂದ್ರಶೇಖರ ಭಾರತೀ ಸ್ವಾಮಿಗಳೇ ಆವಿರ್ಭವಿತರಾಗಿದ್ದದ್ದು ನಿಸ್ಸಂದೇಹವಾಗಿ ಗೋಚರಿಸುತ್ತಿತ್ತು. ಚಂದ್ರಶೇಖರ ಭಾರತೀ ಸ್ವಾಮಿಗಳು ಹೀಗೆ ಇದ್ದಿರಬೇಕು ಎಂದೆನಿಸುತ್ತಿತ್ತು. ತಪಸ್ಸಿನಲ್ಲಂತೂ ಚಂದ್ರಶೇಖರ ಭಾರತೀ ಸ್ವಾಮಿಗಳ ಮತ್ತೊಂದು ಅವತಾರದಂತೆಯೇ ಇದ್ದರು. ಶ್ರೀಗಳವರ ಅನುಷ್ಠಾನ ಎಷ್ಟೋ ದಿನಸಗಳ ಕಾಲ ಆಹಾರಗಳಿಲ್ಲದೇ ಸಾಗುತ್ತಿತ್ತು. ಈ ಎಲ್ಲಾ ಗುಣಗಳಿಂದಾಗಿಯೇ ತಮ್ಮ ವಿಜಯಯ ಯಾತ್ರೆಯ ಸಂದರ್ಭದಲ್ಲಿ ಶಿಷ್ಯ ಸಮೂಹವನ್ನುದ್ದೇಶಿಸಿ ಮಾತನಾಡಿದ್ದ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳವರು ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಗೆ ಅನುಷ್ಠಾನ(ತಪಸ್ಸು) ಚಕ್ರವರ್ತಿಗಳೆಂಬ ಬಿರುದು ನೀಡಿದ್ದರು. ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಅಲೌಕಿಕ ಸಾಧನೆ ಅಂತಹ ಶ್ರೇಷ್ಠವಾದದ್ದು. ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಚಂದ್ರಶೇಖರ ಭಾರತೀ ಸ್ವಾಮಿಗಳ ಬಗ್ಗೆ ಅದೆಷ್ಟು ಗೌರವವಿತ್ತೋ ಸಚ್ಚಿದಾನಂದ ಭಾರತೀ ಸ್ವಾಮಿಗಳವರ ಬಗ್ಗೆಯೂ ಅಷ್ಟೇ ಗೌರವಾದರಗಳಿದೆ. ಚಂದ್ರಶೇಖರ ಭಾರತೀ ಸ್ವಾಮಿಗಳವರು ಶೃಂಗೇರಿ ಪೀಠದ ಮಾಣಿಕ್ಯವಾದರೆ, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರು ಆ ಶೃಂಗೇರಿ ಶಾಖೆಯ ಶಿವಗಂಗಾ ಪೀಠದ ಮಾಣಿಕ್ಯ ಎಂಬುದು ನಿತ್ಯ ಸತ್ಯ, ಸರ್ವವಿದಿತ.  ಇಂದು (16-05-2019) ವೈಶಾಖ ಶುದ್ಧ ದ್ವಾದಶಿ ಸಚ್ಚಿದಾನಂದ ಭಾರತಿ ಸ್ವಾಮಿಗಳ ಜಯಂತಿ. ಶ್ರೀಗಳವರ ತತ್ವಗಳು, ಧರ್ಮಾಚರಣೆ ನಮ್ಮೆಲ್ಲರಿಗೂ ಅನುಕರಣೀಯ.


Note:  ಶೃಂಗೇರಿ ಶಿವಗಂಗಾ ಪೀಠದ ಗುರುಪರಂಪರೆ ಕುರಿತು  ಶ್ರೀಮಠದ ಆಪ್  ನಲ್ಲಿ ಮತ್ತಷ್ಟು ವಿವರಗಳು ಲಭ್ಯವಿದೆ. ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ




Monday 12 November 2018

ಜನರ 'ಸಂತೋಷ' ನಡುರಾತ್ರಿಯಲ್ಲಿ ಕಸಿವವರು ಹೇಡಿಗಳಲ್ಲದೆ ಮತ್ತೇನು?

ಕರ್ನಾಟಕದ ರಾಜಕೀಯ ಪರಿಸ್ಥಿತಿ ಸಧ್ಯದ ಮಟ್ಟಿಗೆ "ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡರು" ಎಂಬಂತಾಗಿದೆ. ರಾಷ್ಟ್ರೀಯತೆಯ ಬಗ್ಗೆ ಬರೆಯುವವರನ್ನು ಟಾರ್ಗೆಟ್ ಮಾಡುತ್ತಿದ್ದ ಸಿದ್ದರಾಮಯ್ಯನವರ ಸರ್ಕಾರ, ದ್ವೇಷದಿಂದ ಸುಪಾರಿ ಕೊಡುತ್ತಿದ್ದ ಸಲಹೆಗಾರರು ಅಧಿಕಾರದಿಂದ ಕೆಳಗಿಳಿದದ್ದಕ್ಕೆ ಸಂತೋಷಪಡಬೇಕೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲವಾಗಿಸಲು ಕೊಲೆ ಸುಪಾರಿ ಕೊಡದಿದ್ದರೂ, ಬಂಧನಕ್ಕೊಳಪಡಿಸುತ್ತಿದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೋ ಒಂದೂ ತಿಳಿಯುತ್ತಿಲ್ಲ. ಹಿಂದೆಲ್ಲಾ ಟಿಪ್ಪು, ಇಸ್ಲಾಂ ನ್ನು ಟೀಕಿಸಿದವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿತ್ತು. ಈ ವರ್ಷ ಟಿಪ್ಪು ಜಯಂತಿಯನ್ನು ವಿರೋಧಿಸಿದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಲಾಗಿದೆ.  ಒಟ್ಟಿನಲ್ಲಿ ಸಿದ್ದರಾಮಯ್ಯ-ಕುಮಾರಸ್ವಾಮಿ ಇಬ್ಬರ ಸರ್ಕಾರಗಳ ಉದ್ದೇಶ ಮಾತ್ರ ಸ್ಪಷ್ಟ, ಅದು ರಾಷ್ಟ್ರೀಯವಾದಿ ಬರಹಗಾರರ ಧ್ವನಿ ಅಡಗಿಸಬೇಕೆಂಬುದು.

                                                         ಖ್ಯಾತ ಅಂಕಣಕಾರ ಸಂತೋಷ್ ತಮ್ಮಯ್ಯ

ಹಿಂದಿನ ಮುಖ್ಯಮಂತ್ರಿಗಳೇನೋ ತಾವು ಅಪ್ಪಟ್ಟ ಟಿಪ್ಪು ಅಭಿಮಾನಿ ಎಂದು ಘೋಷಿಸಿಕೊಂಡುಬಿಟ್ಟಿದ್ದರು. ಆದರೆ ಟಿಪ್ಪು ವಿಷಯದಲ್ಲಿ ಈಗಿನ ಮುಖ್ಯಮಂತ್ರಿಗಳದ್ದು ದ್ವಂದ್ವ. ಬೂಟಾಟಿಕೆ. ಅದು, 2015 ರ ಟಿಪ್ಪು ಜಯಂತಿ ಕಾರ್ಯಕ್ರಮ, ರಕ್ತಪಾತವಾದರೂ ಸರಿಯೇ ಟಿಪ್ಪು ಜಯಂತಿಯನ್ನು ನಡೆಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದ ಸಿದ್ದರಾಮಯ್ಯ ಸರ್ಕಾರ, ಟಿಪ್ಪು ಸುಲ್ತಾನನನ್ನು ಬಣ್ಣಿಸಲು "ಟಿಪ್ಪುವಿನ ಕನಸುಗಳು"ನ್ನು ಕಟ್ಟಿಕೊಟ್ಟಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಆಹ್ವಾನಿಸಿತ್ತು. ತಮ್ಮ ಧಣಿಯ ಎದುರು ಅವರ ಕುಲದೈವವನ್ನು ಹೊಗಳಲು ನಿಂತ ಸರ್ಕಾರಿ ಪ್ರಾಯೋಜಿತ ಸಾಹಿತಿ ಗಿರೀಶ್ ಕಾರ್ನಾಡ್ ಮಾತಿನ ಓಘದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರೇಕೆಬೇಕು? ಟಿಪ್ಪು ಹೆಸರಿಡಬೇಕು, ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಇರಲಿಲ್ಲ ಎಂದುಬಿಟ್ಟಿದ್ದರು.

ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಏನು?, ಮಹಾಭಾರತದ ಯುದ್ಧದಲ್ಲಿ ಅರ್ಜುನ ಕೌರವರ ವಿರುದ್ಧ ಏಕೆ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗ ಮಾಡಲಿಲ್ಲ? ದನ್ಯಾಂಗ್-ಕುನ್ಶಾನ್ ಗ್ರ್ಯಾಂಡ್ ಬ್ರಿಡ್ಜ್ ನಿರ್ಮಾಣಕ್ಕೆ ಶ್ರೀರಾಮನ ಕೊಡುಗೆ ಏನು ಎಂಬಂಥಹ ಸೆನ್ಸಿಬಲ್ ಪ್ರಶ್ನೆಗಳು ಸೆಕ್ಯುಲರ್ ಸರ್ಕಾರಿ ಪ್ರಾಯೋಜಿತ ಬುದ್ಧಿಜೀವಿಗಳಿಗಷ್ಟೇ ಹೊಳೆಯುವುದಕ್ಕೆ ಸಾಧ್ಯ. ಇರಲಿ... ಈಗ ಗಿರೀಶ್ ಕಾರ್ನಾಡ್ ಅವರ ಹೇಳಿಕೆಗೆ ಮರಳೋಣ. "ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಟಿಪ್ಪು ಹಿಂದೂವಾಗಿದ್ದರೆ ಆತನಿಗೆ ಶಿವಾಜಿ ಮಹಾರಾಜನಷ್ಟೇ ಗೌರವ ಸಲ್ಲುತ್ತಿತ್ತು, ಟಿಪ್ಪು ಕೆಂಪೇಗೌಡರಿಗಿಂತಲೂ ಶ್ರೇಷ್ಠ" ಎಂದಿದ್ದ ಕಾರ್ನಾಡರನ್ನು ಇಂದಿನ ಸಿಎಂ, ಅಂದಿನ ವಿಪಕ್ಷ ನಾಯಕ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಿ ಪ್ರಾಯೋಜಿತ ಸಾಹಿತಿ ಇತಿಹಾಸದ ಪರಿಜ್ಞಾನವಿಲ್ಲ ಎಂದೆಲ್ಲಾ ಟೀಕಿಸಿದ್ದರು. ಕಾರ್ನಾಡರು ಕ್ಷಮೆ ಕೇಳಿದ ಹೊರತಾಗಿಯೂ ಸಹ ಕೆಂಪೇಗೌಡರ ಗೌರವಾದರಗಳಿಗೆ ಧಕ್ಕೆ ಉಂಟುಮಾಡಿದ್ದ ಕಾರ್ನಾಡರನ್ನು ತರಾಟೆಗೆ ತೆಗೆದುಕೊಳ್ಳದೇ ಬಿಟ್ಟಿರಲಿಲ್ಲ ಕುಮಾರಸ್ವಾಮಿ. ಆದರೆ ಇಂದು ಅದೇ ಕುಮಾರಸ್ವಾಮಿ ಅಧಿಕಾರಾಕ್ಕಾಗಿ ಕಾಂಗ್ರೆಸ್ ಜೊತೆ ಸೇರಿ, ಟಿಪ್ಪುವಿನ ವಿಮರ್ಶೆಗೆ ನಿಂತ ಕೊಡವರನ್ನು ಧರ್ಮ ನಿಂದನೆಯ ಆರೋಪದಡಿ ಜೈಲಿಗೆ ಕಳಿಸಿ ಟಿಪ್ಪು ಜಯಂತಿಯನ್ನು ಆಚರಿಸುವಷ್ಟು ದೈನೇಸಿ ಪರಿಸ್ಥಿತಿ ತಲುಪಿದ್ದಾರೆ!.

ಕೆಂಪೇಗೌಡರಿಗಿಂತ ಟಿಪ್ಪು ಶ್ರೇಷ್ಠ ಎಂದು ಹೇಳಿದ ಮಾತ್ರಕ್ಕೇ ಕುಮಾರಸ್ವಾಮಿಗಳ ಸಂವೇದನೆ ಜಾಗೃತವಾಗುವುದಾದರೆ, ಇನ್ನು ತಮ್ಮವರನ್ನು ತರಿದು, ಮತಾಂತರ ಮಾಡಿದ್ದ ಕೊಡವರನ್ನು ಲೆಕ್ಕಿಸದೇ ಟಿಪ್ಪು ಜಯಂತಿಯನ್ನು ಮಾಡಿದ್ದಾರಲ್ಲಾ, ಸಂವೇದನೆ, ಸ್ವಧರ್ಮ ಅಭಿಮಾನವೆಲ್ಲಾ ಅನ್ವಯಿಸುವುದು ನಿಮಗೊಬ್ಬರಿಗೇನಾ? ಕೊಡವರ ಭಾವನೆಗಳಿಗೆ ನಿಮ್ಮ ಸರ್ಕಾರದಲ್ಲಿ ಬೆಲೆಯೇ ಇಲ್ಲವಾ ಮುಖ್ಯಮಂತ್ರಿಗಳೇ? ಅಥವಾ ಅಂದಿನ ನಿಮ್ಮ ಸಂವೇದನೆ, ಆಕ್ರೋಶಗಳು ಬೂಟಾಟಿಕೆಯದ್ದಾ? ಯಾವಾಗಲೋ ಆಗಿ ಹೋದ ಕೆಂಪೇಗೌಡರ ಹೆಸರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಮರುನಾಮಕರಣ ಮಾಡಬೇಕು ಎಂದತಕ್ಷಣವೇ ನೀವು ದಿಢೀರನೆ ಎದ್ದು ಕುಳಿತು ನಖಶಿಖಾಂತ ಉರ್ಕೊಂಡಿದ್ದು ಪ್ರತಿಭಟಿಸಿದ್ದು ಸರಿ ಎನ್ನುವುದಾದರೆ ತಮ್ಮ ಸಂಸ್ಕೃತಿಯನ್ನು ನಾಮಾವಶೇಷ, ಮತಾಂತರ ಮಾಡಿ ಭೂಭಾಗಗಳನ್ನು ಮರು ನಾಮಕರಣ ಮಾಡಲು ಹವಣಿಸಿದ್ದ ಟಿಪ್ಪು ಹಾಗೂ ಆತನ ಜಯಂತಿಯನ್ನು ಕೊಡವರು ವಿರೋಧಿಸುವುದರಲ್ಲಿ ತಪ್ಪೇನು?

ನಿಮ್ಮ ಬೂಟಾಟಿಕೆ, ಯು-ಟರ್ನ್ ಗಳು ರಾಜ್ಯದ ಜನತೆಗೇನು ಹೊಸದೇನಲ್ಲ ಬಿಡಿ, ನೀವೇನೋ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಕ್ಕಾಗಿ, ಸ್ವಾಭಿಮಾನವನ್ನು ಅಡ (ಒತ್ತೆ) ಇಟ್ಟು ಟಿಪ್ಪು ಜಯಂತಿಯನ್ನು ಸಹಿಸಿಕೊಳ್ಳಬಹುದು. ಈಗಿನ ಪರಿಸ್ಥಿತಿಯಲ್ಲಿ ನೀವೇ ಒಂದೊಮ್ಮೆ ಟಿಪ್ಪು ಕೆಂಪೇಗೌಡರಿಗಿಂತ ಶ್ರೇಷ್ಠ ಎಂದುಬಿಟ್ಟರೂ ಆಶ್ಚರ್ಯವೇನು ಇಲ್ಲ. ಆದರೆ ಕದನ ಕಲಿಗಳಾದ ಕೊಡವರೇಕೆ ತಮ್ಮ ಸ್ವಾಭಿಮಾನವನ್ನು ಒತ್ತೆ ಇಡಬೇಕು? ಯಾವ ಪುರುಷಾರ್ಥಕ್ಕಾಗಿ ಟಿಪ್ಪು-ಆತನ ಜಯಂತಿಯನ್ನು ಸಹಿಸಿಕೊಳ್ಳಬೇಕು ಹೇಳಿ? ಟಿಪ್ಪು ಜಯಂತಿ ವಿರುದ್ಧ ಮಾತನಾಡಿದರೆ ಹುಷಾರ್, ಇಷ್ಟ ಇಲ್ಲ ಅಂದ್ರೆ ಕಾರ್ಯಕ್ರಮಕ್ಕೆ ಬರ್ಬೇಡಿ ಮನೆಯಲ್ಲಿರಿ ಎನ್ನುತ್ತೀರಲ್ಲಾ.... ಗಿರೀಶ್ ಕಾರ್ನಾಡರು ವಿಮಾನ ನಿಲ್ದಾಣಕ್ಕೆ ಮರುನಾಮಕರಣದ ಪ್ರಸ್ತಾಪವನ್ನಿಟ್ಟಾಗ ನಿಮ್ಮ ಪ್ರತಿಭಟನೆಗೆ "ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದನ್ನು ವಿರೋಧಿಸಿದರೆ ಹುಷಾರ್, ಇಷ್ಟ ಇಲ್ಲ ಅಂದ್ರೆ ಆ ವಿಮಾನ ನಿಲ್ದಾಣಕ್ಕೆ ಬರಲೇಬೇಡಿ" ಎಂದು ಹೇಳಿದಷ್ಟೇ ಸೆನ್ಸಿಬಲ್ ಆಗಿದೆಯಲ್ಲವೇ ನಿಮ್ಮ ಇತ್ತೀಚಿನ ಎಚ್ಚರಿಕೆ ಕೂಡ! ಕೆಂಪೇಗೌಡರ ಕೊಡುಗೆಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನೀವು ಗಿರೀಶ್ ಕಾರ್ನಾಡರನ್ನು, ಅವರ ಮನಸ್ಥಿತಿಯನ್ನು ಸರ್ಕಾರಿ ಪ್ರಾಯೋಜಿತ ಸಾಹಿತಿ ಎಂದೆಲ್ಲಾ ವಿಮರ್ಶೆ ಮಾಡಬಹುದಾದರೆ, ತಮ್ಮ ಸಂಸ್ಕೃತಿ, ಸಂತತಿಗೇ ಕಂಟಕವಾಗಿದ್ದ ಟಿಪ್ಪುವನ್ನು ಹಾಗೂ ಆತನಿಗೆ ಮತಾಂತರ, ನರಮೇಧಗಳಿಗೆ ಪ್ರೇರಣೆ ನೀಡುತ್ತಿದ್ದ ಇಸ್ಲಾಂನ್ನು ಕೊಡವರು ವಿಮರ್ಶಿಸಬಾರದೇ? ಹಾಗೆ ವಿಮರ್ಶಿಸಿದ ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಧರ್ಮ ನಿಂದನೆ ಪ್ರಕರಣದಲ್ಲಿ ಮಧ್ಯರಾತ್ರಿ ಬಂಧಿಸುತ್ತೀರಾ? ನಿಮ್ಮದ್ಯಾವ ಸೀಮೆ ರಾಜಧರ್ಮ ಸ್ವಾಮಿ? ಹಾಗಾದರೆ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರನ್ನು ಮರುನಾಮಕರಣ ಮಾಡಲು ಪ್ರತಿಭಟಿಸಿ ಅಲ್ಪಸಂಖ್ಯಾತರ ಭಾವನೆಗಳಿಗೆ ಘಾಸಿಯುಂಟುಮಾಡಿದ್ದ ನಿಮ್ಮ ಮೇಲೂ ಕೇಸ್ ಹಾಕಬಹುದಲ್ಲ!

ಘಟನೆ-2
ಟಿಪ್ಪು ದೇಶಭಕ್ತನಲ್ಲ ಎನ್ನುವ ಕೊಡವರು ಭಾರತೀಯರಲ್ಲ-ನಿರ್ದೇಶಕ ಸತ್ಯು, 2016 ನವೆಂಬರ್
ಕೊಡವರು ಇಲ್ಲಿನ ಸ್ಥಾನಿಕರಲ್ಲ. ಈ ನೆಲದ ಮೂಲದವರಲ್ಲ- ಕೋ.ಚೆನ್ನಬಸಪ್ಪ, 2013 ಡಿಸೆಂಬರ್

ಮುಖ್ಯಮಂತ್ರಿಗಳೇ ನಿಮಗೆ ಗೊತ್ತಿರಬಹುದು, ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಕೆ. ರೆಹಮಾನ್ ಖಾನ್ ಯುಪಿಎ ಸರ್ಕಾರದಲ್ಲಿ ಟಿಪ್ಪು ವಿವಿ ಸ್ಥಾಪನೆ ಕುರಿತು ಮಾತನಾಡಿದಾಗಿನಿಂದ ಈ ಟಿಪ್ಪುವಿನ ನಿಜ ಸ್ವರೂಪದ ಬಗ್ಗೆ ಹೆಚ್ಚು ಸಾರ್ವಜನಿಕ
ವಲಯದಲ್ಲಿ ಚರ್ಚೆ ನಡೆಯಲು ಪ್ರಾರಂಭವಾಗಿತ್ತು. ಅಲೀಘರ್ ವಿವಿ ಮಾದರಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಖ್ಯಾತ ವಿದ್ವಾಂಸ ಚಿದಾನಂದ ಮೂರ್ತಿಗಳೂ ಸಹ ತಮ್ಮ ಧ್ವನಿ ಎತ್ತಿ ಟಿಪ್ಪು ವಿವಿಯನ್ನು ವಿರೋಧಿಸಿದ್ದರು. ಅದೇ ವೇಳೆ ನಡೆದಿದ್ದ 79 ನೇಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಶ್ರೀರಂಗಪಟ್ಟಣದಲ್ಲಿ  ಸ್ಥಾಪಿಸಲು ಉದ್ದೇಶಿಸಿರುವ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿಡುವುದನ್ನು ವಿರೋಧಿಸುವುದು ಖಂಡನೀಯ. ಕೆಲವರು ಹೇಳುವಂತೆ ಟಿಪ್ಪು ಕೊಡವರನ್ನು ಅಷ್ಟೊಂದು ಸಂಖ್ಯೆಯಲ್ಲಿ (೭೦ಸಾವಿರ) ಕೊಂದಿದ್ದರೆ ಇಂದು ಕೊಡಗಿನಲ್ಲಿ ಕೊಡವರ ಸಂಖ್ಯೆ ತುಂಬಾ ಕಡಿಮೆ ಇರಬೇಕಿತ್ತು. ಆದರೆ ಕೊಡಗಿನಲ್ಲಿ ಇಂದು ಕೊಡವರ ಸಂಖ್ಯೆ ಹೆಚ್ಚಿದೆ. ಟಿಪ್ಪು ಮತಾಂತರ ಮಾಡಿದ್ದಿದ್ದರೆ ಮುಸಲ್ಮಾನರ ಸಂಖ್ಯೆ ಕೊಡಗಿನಲ್ಲಿ ಹೆಚ್ಚಿರಬೇಕಿತ್ತು. ಆದರೆ ಇಂದು ಕೊಡಗಿನಲ್ಲಿ ಕೇವಲ ೧೪,೭೩೦ ಜನ ಮಾತ್ರ ಮುಸಲ್ಮಾನರಿದ್ದಾರೆ.” ಎಂದಿದ್ದರು.

ಚಿದಾನಂದ ಮೂರ್ತಿಗಳು ಹಾಕಿದ್ದ ಸವಾಲಿಗೆ ಉತ್ತರವೇ ಕೊಡಲು ಸಾಧ್ಯವಾಗದೇ ಕೊನೆಗೆ ಕೊಡವರು ಭಾರತೀಯರೇ ಅಲ್ಲ ಈ ನೆಲದ ಮೂಲದವರೇ ಅಂದುಬಿಟ್ಟರು ಕೋ.ಚೆ. ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಅಡ ಇಟ್ಟು, ಸಂಸ್ಕೃತಿಯನ್ನು ಹರಾಜು ಹಾಕಿ ಬದುಕುವ ರಾಜಕಾರಣಿಗಳಿಗೆ ಟಿಪ್ಪು-ಇಸ್ಲಾಂ ನಲ್ಲಿರುವ ಬರ್ಬರತೆಯ ಟೀಕೆ ಧರ್ಮ ನಿಂದನೆಯಾಗಿ ಕಾಣಿಸುತ್ತೆ. ಪ್ರಕರಣ ದಾಖಲಿಸಬೇಕು ಅಂತಲೂ ಅನಿಸುತ್ತೆ. ಆದರೆ ದೇಶವೇ ಹೆಮ್ಮೆ ಪಡುವಂತಹ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯನವರನ್ನು ನೀಡಿದ ಕೊಡವರನ್ನು ಭಾರತೀಯರೇ ಅಲ್ಲ ಅಂದಿದ್ದು ಕೊಡವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನಿಸುವುದಿಲ್ಲ. ಟಿಪ್ಪು ಜಯಂತಿ ವಿರೋಧಿಸಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿ  ವಿರೋಧವನ್ನು ಖಂಡಿಸುವಷ್ಟು ದಾಷ್ಟ್ರ್ಯವನ್ನು ಅಪ್ಪಿತಪ್ಪಿಯೂ ಯಾವುದೇ ಸರ್ಕಾರ ಕೊಡವರ ಭಾವನೆಗಳಿಗೆ ಧಕ್ಕೆಯುಂಟಾದರೆ ಕ್ರಮ ಎದುರಿಸಬೇಕಾಗುತ್ತೆ ಎಂದು ಹೇಳುವುದಕ್ಕೆ ತೋರಿಸುವುದಿಲ್ಲ. ಇನ್ನು ನಿರ್ದೇಶಕ ಸತ್ಯು ಟಿಪ್ಪು ದೇಶಭಕ್ತನಲ್ಲ ಎನ್ನುವ ಕೊಡವರು ಭಾರತೀಯರೇ ಅಲ್ಲ ಅಂದಾಗ ಒಂದು ಇಡೀಯ ಸಂಸ್ಕೃತಿ, ಜನಾಂಗಕ್ಕೇ ಅವಮಾನ ಮಾಡಲಾಗುತ್ತಿದೆ ಉಂಟಾಗಿದೆ ಎಂಬ ಪ್ರಜ್ನೆ ಸ್ವಾಭಿಮಾನವನ್ನು ಒತ್ತೆ ಇಟ್ಟು ಬದುಕುವ ಸೆಕ್ಯುಲರ್ ರಾಜಕಾರಣಿಗೂ ಮೂಡುವುದಿಲ್ಲ!

5 ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಶತಾಯ ಗತಾಯ ಟಿಪ್ಪು ಜಯಂತಿಯನ್ನು ಮಾಡಲೇಬೇಕೆಂಬ ಜಿದ್ದಿಗೆ ಬಿದ್ದ ಪರಿಣಾಮ ಹಲವರು ಜೀವ ಕಳೆದುಕೊಂಡಿದ್ದರು. ಈಗ ನಿಮ್ಮ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ವಿರೋಧಿಸುವವರನ್ನು ಜೈಲಿಗೆ ಕಳಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ನಾಮ ಮಾಡುವ ಮೂಲಕವಾದರೂ ಟಿಪ್ಪು ಜಯಂತಿ ಮಾಡುತ್ತೇವೆ ಎಂಬ ಸಂದೇಶ ನೀಡಿದೆ. ಸಿದ್ದರಾಮಯ್ಯ ತಾವೊಬ್ಬ ಟಿಪ್ಪು ಅಭಿಮಾನಿ ಎಂದು ನೇರಾ ನೇರವಾಗಿ ಹೇಳಿಕೊಂಡು ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ಈ ರೀತಿ ನೇರಾ ನೇರವಾಗಿರುವ ವಿರೋಧಿಗಳನ್ನು ಎದುರಿಸುವುದು ಯಾವುದೇ ಸಮಾಜಕ್ಕೆ ಆರೋಗ್ಯಕರವೇ ಹೌದು, ಆದರೆ ದೇವಾಲಯಗಳಿಗೆ ಭೇಟಿ ನೀಡುತ್ತಾ ಹೋಮ-ಹವನ ಮಾಡಿಸುತ್ತಾ ಒಳಗಿಂದಲೇ ಗೆದ್ದಲ ಹುಳುಗಳ ತರ ಪ್ರಜ್ಞಾಪೂರ್ವಕವಾಗಿಯೂ, ಅವಕಾಶವಾದಿತನಕ್ಕೋ ಒಟ್ಟಿನಲ್ಲಿ ಸಂಸ್ಕೃತಿಯನ್ನು ನಾಶ ಮಾಡುವವರ ಬಗ್ಗೆ ಯಾವುದಕ್ಕೂ ಎಚ್ಚರದಿಂದ ಇರಬೇಕಿದೆ. ಕೊನೆಯದಾಗಿ ಮಾತೆತ್ತಿದರೆ ದೇವಾಲಯಗಳನ್ನು ಸುತ್ತುತ್ತೀರಲ್ಲಾ ಮುಖ್ಯಮಂತ್ರಿಗಳೇ, ಮೇಲುಕೋಟೆ ಪ್ರಾಂತ್ಯದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದಾಗ ನಿಮಗೊಂದಷ್ಟು ವ್ಯವಧಾನವಿದ್ದರೆ ಕ್ಷೇತ್ರ ಪರಿಚಯ ಮಾಡಿಕೊಳ್ಳುತ್ತಾ, ಅಲ್ಲಿನ ಅರ್ಚಕರನ್ನು ಕೇಳಿ ಮಂಡ್ಯಂ ಅಯ್ಯಂಗಾರರು ದೀಪಾವಳಿಯೇ ಆಚರಿಸುವುದಿಲ್ಲವಂತೆ.. ಯಾಕೆ ಅಂತ, ಅವರು ನಿಮ್ಮ ಆರಾಧ್ಯ ದೈವ ಟಿಪ್ಪು ಈ ನಾಡಿನ ಸಂಸ್ಕೃತಿಗೆ ಕೊಟ್ಟ ಕೊಡುಗೆ ಬಗ್ಗೆ ವಿವರವಾಗಿ ತಿಳಿಸುತ್ತಾರೆ.  ಹ್ಹಾ... ಇಷ್ಟವಿಲ್ಲದಿದ್ದರೆ ಮಂಡ್ಯಂ ಅಯ್ಯಂಗಾರರ ಕಥೆಯನ್ನು ಕೇಳದೇ ಮನೆಯಲ್ಲಿಯೇ ಇದ್ದುಬಿಡಿ ಆದರೆ ಟಿಪ್ಪುವನ್ನು ವಿರೋಧಿಸಿದರೆಂದು ನೀವು ಅವರ ಮೇಲೂ ಕೇಸ್ ಹಾಕಬೇಡಿ.. ಸದಾ ಬೂಟಾಟಿಕೆಯನ್ನೇ ಮಾಡುವ ನಿಮ್ಮ ಸರ್ಕಾರದಿಂದ, ಸತ್ಯ ಹೇಳಿದ ರಾಷ್ಟ್ರೀಯವಾದಿ ಬರಹಗಾರರನ್ನು ಮಧ್ಯರಾತ್ರಿ ಬಂಧಿಸುವುದನ್ನು ಬಿಟ್ಟರೆ ಮತ್ತೇನು ನಿರೀಕ್ಷಿಸಲು ಸಾಧ್ಯ? ಈ ವರೆಗೂ ಮೊಘಲರ ಆಡಳಿತದಲ್ಲಿದ್ದ ನಿರಂಕುಶ ಪ್ರಭುತ್ವ, ಟಿಪ್ಪು ನಿರಂಕುಶ ಪ್ರಭುತ್ವವನ್ನು ಪಠ್ಯದಲ್ಲಷ್ಟೇ ಓದಿದ್ದೆವು, ಈಗ ಪ್ರತ್ಯಕ್ಷ ನೋಡುತ್ತಿದ್ದೇವೆ ಅಷ್ಟೇ..! 

Tuesday 26 June 2018

ಅಹಂ ನಿಂದ ಅಹಂ ಬ್ರಹ್ಮಾಸಿಯೆಡೆಗೆ ನಡೆದ ಸಂತ ಸದಾಶಿವ ಬ್ರಹ್ಮೇಂದ್ರ

ನವಾಬ ಸದಾಶಿವ ಬ್ರಹ್ಮೇಂದ್ರರ ಕೈ ಕತ್ತರಿಸುತ್ತಿರುವ ಕೆತ್ತನೆ

                                           
17-18 ನೇ ಶತಮಾನ. ಆಂಧ್ರದಿಂದ ಮೋಕ್ಷಯಿಂಟಿ ಸೋಮಸುಂದರ ಅವಧಾನಿ ಹಾಗೂ ಪಾರ್ವತಿ ದಂಪತಿಗಳು ಮಧುರೈ ಪ್ರಾಂತ್ಯಕ್ಕೆ ಬಂದು ನೆಲೆಸಿದ್ದರು. "ಗೃಹ್ಣಾಮಿ ತೇ ಸುಪ್ರಜಾಸ್ತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಠಿರ್ಯಥಾsಸಃ" ಎಂಬ ಪಾಣಿಗ್ರಹಣದ ಮಂತ್ರವನ್ನು ಜೀವಿಸಿದ್ದ ದಂಪತಿಗಳು. ಸೋಮಸುಂದರ ಅವಧಾನಿಗಳಂತೂ ಸದಾ ಯೋಗ ಸಾಧನೆಯಲ್ಲೇ ನಿರತರಾಗಿದ್ದ ಋಷಿತುಲ್ಯ ಗೃಹಸ್ಥರು. ಪುತ್ರ ಸಂತಾನಕ್ಕಾಗಿ ರಾಮನಾಥೇಶ್ವರನಲ್ಲಿ ಪ್ರಾರ್ಥಿಸಿದ್ದ ಆ ಋಷಿತುಲ್ಯ ಗೃಹಸ್ಥರಲ್ಲಿ ಶಿವರಾಮಕೃಷ್ಣನೆಂಬ ಹೆಸರಿನಲ್ಲಿ ಮಹಾನ್ ಬ್ರಹ್ಮಜ್ಞಾನಿಯೇ ಅವತರಿಸಿದ್ದ. ತರ್ಕಶಾಸ್ತ್ರ ನಿಷ್ಣಾತನಾಗಿ, ವಾಗ್ಗೇಯಕಾರನಾಗಿ ವಿಜೃಂಭಿಸಿದ ಅವರು ಕೊನೆಗೆ ಸಕಲವನ್ನೂ ತೊರೆದು "ಪಿಬರೇ ರಾಮ ರಸಂ... ನಂತಹ ಶುದ್ಧ ಆಧ್ಯಾತ್ಮ ಕೀರ್ತನೆಗಳನ್ನು ರಚಿಸಿ, ಸಂತನಾಗಿ, ಬ್ರಹ್ಮಜ್ಞಾನಿಗಳಿಗೆ ಇಂದ್ರಸಮಾನನಾಗಿ ಸದಾಶಿವ ಬ್ರಹ್ಮೇಂದ್ರನೆಂಬ ಅಭಿದಾನದಿಂದ ಜೀವನ್ಮುಕ್ತರಾದರು.

ಸದಾಶಿವ ಶಿವ ಬ್ರಹ್ಮೇಂದ್ರರ ವ್ಯಕ್ತಿತ್ವ ಹುಟ್ಟಿನಿಂದಲೇ ಸಾತ್ವಿಕವಾದ ವ್ಯಕ್ತಿತ್ವವಾದರೂ, ಜೀವನ್ಮುಕ್ತರಂತೇನೂ ಇರಲಿಲ್ಲ. ಅಥವಾ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಕೀರ್ತನೆಗಳನ್ನು ರಚಿಸುವ ವಾಗ್ಗೇಯಕಾರನ ಚರ್ಯೆಯೂ ತೀವ್ರವಾದದ್ದೇನು
ಆಗಿರಲಿಲ್ಲ. ವೇದಗಳನ್ನು ಅಭ್ಯಾಸ ಮಾಡಿದ್ದ ವಿದ್ವಾಂಸರಾದ ತಂದೆಯೇ ಶಿವರಾಮಕೃಷ್ಣನ ಮೊದಲ ಗುರುಗಳು. ತಿರುವಿಶೈನಲ್ಲೂರಿನ ರಾಮಭದ್ರ ದೀಕ್ಷಿತರಲ್ಲಿ ಶಾಸ್ತ್ರಾಧ್ಯಯನ. ಜೊತೆ ಜೊತೆಗೇ ಮರುದಾನಲ್ಲೂರು ಸದ್ಗುರು ಸ್ವಾಮಿಗಳು, ಬೋಧೇಂದ್ರ ಸರಸ್ವತಿಗಳು ಹಾಗೂ ಶ್ರೀಧರ ವೆಂಕಟೇಶ ಅಯ್ಯವಾಳರೆಂಬ ಸಂಕೀರ್ತನ ಸಂಪ್ರದಾಯದ ತ್ರಿಮೂರ್ತಿಗಳ ಸಂಪರ್ಕವೂ ಬೆಳೆಯಿತು. 17 ವರ್ಷದವನಾಗಿದ್ದಾಗ ವಿವಾಹವೂ ಆಯಿತು. ಅತ್ಯಂತ ಕಿರಿಯ ವಯಸ್ಸಿನಲ್ಲೇ
ಶಿವರಾಮಕೃಷ್ಣರಲ್ಲಿದ್ದ ಶಾಸ್ತ್ರಗಳ ಮೇಲಿನ ಅದ್ಭುತ ಪಾಂಡಿತ್ಯ, ಆಧ್ಯಾತ್ಮ ಜ್ಞಾನವನ್ನು ಕಂಡು ಆತನ ಗುರುಗಳೂ ಅಚ್ಚರಿಗೊಂಡಿದ್ದರು. ಪರಮ ಶಿವೇಂದ್ರರೆಂಬ ಪಂಡಿತರೂ, ಯತಿಗಳಿಂದ ಶಿಷ್ಯತ್ವ ಪಡೆದ ನಂತರದ ದಿನಗಳಲ್ಲಿ ಶಿವರಾಮಕೃಷ್ಣರ ಪಾಂಡಿತ್ಯ ಶಕ್ತಿ, ತರ್ಕ ಶಕ್ತಿ ಮತ್ತಷ್ಟು ತೀಕ್ಷ್ಣವಾಯಿತು. ವಾದಗಳಿಗೆ ಪ್ರತಿವಾದ ಹೂಡಿ ಎದುರಾಳಿ ವಿದ್ವಾಂಸರನ್ನು, ಪಂಡಿತರನ್ನು ಮಣಿಸುತ್ತಿದ್ದ ಶಿವರಾಮಕೃಷ್ಣರ ತರ್ಕ ಸಾಮರ್ಥ್ಯಕ್ಕೆ ಬೆರಗಾಗಿದ್ದ ಮೈಸೂರು ಮಹಾರಾಜರು ಅವರನ್ನು ತಮ್ಮ ಆಸ್ಥಾನ ವಿದ್ವಾಂಸರಾಗಲು ಆಹ್ವಾನವಿತ್ತರು. ಅಲ್ಲಿಯೂ ತಮ್ಮೊಂದಿಗೆ ವಾದ ಮಾಡಲು ಬರುತ್ತಿದ್ದ ಪಂಡಿತರು, ವಿದ್ವಾಂಸರುಗಳ ವಾದವನ್ನು ಆಪೋಷನ ತೆಗೆದುಕೊಳ್ಳುವ ಕಾರ್ಯ ಮುಂದುವರೆಯಿತು.

ಅಷ್ಟೇ ಅಲ್ಲ. ಬರುಬರುತ್ತಾ ಶಿವರಾಮಕೃಷ್ಣರೆದುರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದೇ ಪ್ರತಿಷ್ಠೆಯ ವಿಷಯವಾಯಿತು. ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿ ಪ್ರಶಸ್ತಿಗಳನ್ನು ಪಡೆಯಲು ಪಂಡಿತರು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥಾನಕ್ಕೆ
ಭೇಟಿ ನೀಡುತ್ತಿದ್ದರು. ಆದರೇನಂತೆ ಶಿವರಾಮಕೃಷ್ಣರ ಪಾಂಡಿತ್ಯದೆದುರು ಯಾರೂ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಸೋತವರಿಗೆಲ್ಲಾ ಶಿವರಾಮಕೃಷ್ಣರು ನಿಗದಿಪಡಿಸುತ್ತಿದ್ದ ವೇತನ (ಅಥವಾ ನಗದು)ವಷ್ಟೇ ಗಟ್ಟಿ. ಸಾಮಾನ್ಯವಾಗಿ ಅತಿ ಬುದ್ಧಿವಂತನ ವಿರುದ್ಧ ಉಳಿದವರು ತಿರುಗಿಬೀಳುವಂತೆ ಶಿವರಾಮಕೃಷ್ಣರ ಪ್ರಕರಣದಲ್ಲಿಯೂ ಆಯಿತು. " ಶಿವರಾಮಕೃಷ್ಣರಿಗೆ ಅವರ ಪಾಂಡಿತ್ಯದ ಬಗ್ಗೆ ಅಹಂಕಾರವಿದೆ, ಅವರ ಸಾಧನೆ ಮುಂದಿನ ಹಂತಕ್ಕೆ ಹೋಗಬೇಕೆಂದರೆ ಇದರಿಂದ ಹೊರತರಬೇಕು ಎಂದು ಪಾಂಡಿತ್ಯದ ಬಿಸಿಯನ್ನು ತಡೆಯಲಾಗದವರು ಪರಮ ಶಿವೇಂದ್ರರ ಬಳಿ ಉಸುರಿದರು. ಶಿವರಾಮಕೃಷ್ಣರನ್ನುದ್ದೇಶಿಸಿ "ವಾದದಲ್ಲಿ ಬೇರೆಯವರನ್ನು ಮೌನಿಯಾಗಿಸುವುದು ಹೇಗೆ ಎಂಬುದು ನಿನಗೆ ಚೆನ್ನಾಗಿಯೇ
ತಿಳಿದಿದೆ, ಆದರೆ ನೀನು ಮೌನಿಯಾಗಿ ಜ್ಞಾನಕ್ಕೆ ಪ್ರಯತ್ನಿಸುವುದು, ಸಾಕ್ಷಾತ್ಕಾರ ಪಡೆಯುವುದು ಯಾವಾಗ? ಇನ್ನೂ ಎಷ್ಟು ಅಂತ ವಾದ ಮಾಡುತ್ತೀಯ"? ಎಂದಿದ್ದರಂತೆ ಪರಮಶಿವೇಂದ್ರರರು. ಆ ಘಟನೆಯೇ ವಾಚಾಳಿಯಾಗಿದ್ದ ಶಿವರಾಮಕೃಷ್ಣರನ್ನು ಅಂತರ್ಮುಖಿ, ಮೌನಿ ಸದಾಶಿವ ಬ್ರಹ್ಮೇಂದ್ರರನ್ನಾಗಿ ಮಾಡಿದ್ದು. ಬ್ರಹ್ಮಜ್ಞಾನ ಪಡೆಯುವ ಹಾದಿಯನ್ನು ತೋರಿದ್ದು. ಗುರುವಿನ ಕೃಪೆಯ ನಂತರ ಶಿವರಾಮಕೃಷ್ಣ ಮತ್ತೆಂದೂ ಮಾತನಾಡಲಿಲ್ಲ. ಹುಟ್ಟುವಾಗ ಕಾಮ ಕ್ರೋಧಗಳಿರಲಿಲ್ಲ, ಲೋಭ, ಮತ್ಸರಗ, ಮದಗಳಿರಲಿಲ್ಲ. ವೇದ-ಶಾಸ್ತ್ರಜ್ಞಾನಗಳನ್ನು ಕಲಿತದ್ದರಿಂದ  ಜೊತೆ ಬಂದದ್ದು ಒಂದೇ, ಅದು ವಾದದ ಹುಚ್ಚು... ಆದೂ ಬಿಟ್ಟ ನಂತರ ಏನು ತಾನೆ ಉಳಿದೀತು?

ಜಗತ್ತೇ ಹಾಗೆ, ಜೀವಂತವಿದ್ದ ಮೇಲೆ ಅರಿಷಡ್ವರ್ಗಗಳಿಗೋ, ಅಥವಾ ಮತ್ತಾವುದಕ್ಕೋ ಜೋತು ಬಿದ್ದಿದರಬೇಕು. ಹಾಗಿದ್ದಾಗಲೇ ಸಮಾಜ 'ಸಹಜ'ವೆನ್ನುವಂತೆ ನೋಡುತ್ತದೆ. ಎಲ್ಲ ಬಂಧಗಳಿಂದ ಕಳಚಿಕೊಂಡವನನ್ನು ಹುಚ್ಚನೆಂಬಂತೆ ನೋಡುತ್ತದೆ. ಶುಕನಿಂದ ಮೊದಲುಗೊಂಡು ಆಗಿಹೋದ ಅದೆಷ್ಟೋ ಬ್ರಹ್ಮಜ್ಞಾನಿಗಳನ್ನೂ ಸಂಸಾರ ಸಾಗರದಲ್ಲಿ ಸಿಲುಕಿದ್ದ ಮರುಳರು ’ಅವರಿಗೆ’ ಮತಿಭ್ರಮಣೆಯಾಗಿದೆಯೆಂದೇ ಹೇಳಿದ್ದು.... ಗುರುವಿನ ಉಪದೇಶ ಪಡೆದು ಮೌನಿ, ಅಂತರ್ಮುಖಿಯಾದ ಸದಾಶಿವ ಬ್ರಹ್ಮೇಂದ್ರರನ್ನೂ ಅಂದಿದ ಸಮಾಜ ಎಂದಿನಂತೆಯೇ ಮರುಳ ಎಂದಿತು. ಅಲ್ಲವೇ?, ಎದುರು ವಾದ ಮಂಡಿಸಲು ಬಂದ ಶಾಸ್ತ್ರವೇತ್ತರನ್ನು, ವಿದ್ವಾಂಸರನ್ನು ಜಿತೋಸ್ಮಿ ಎನ್ನಿಸುತ್ತಿದ್ದ ಸಾಮರ್ಥ್ಯ, ಪಾಂಡಿತ್ಯದಿಂದ ಮನ್ನಣೆ, ಆಸ್ಥಾನ ವಿದ್ವಾಂಸನಾಗಿ ಧನ ಕನಕಗಳನ್ನು ಸಂಪಾದಿಸಿ ಸುಖವಾಗಿರಬಹುದಾಗಿದ್ದ ವ್ಯಕ್ತಿ, ಕಾಶಾಯವನ್ನೂ ಕಿತ್ತೊಗೆದು ಕೌಪೀನಧಾರಿಯಾಗಿ ಕಾಡು ಮೇಡುಗಳಲ್ಲಿ ಸಂಚರಿಸುತ್ತಿದ್ದರೆ ಮರುಳ ಎನ್ನದೇ ಮತ್ತೇನಂದಾರು?

ಸದಾಶಿವ ಬ್ರಹ್ಮೇಂದ್ರರ ಈ ಸ್ಥಿತಿಯನ್ನು ಕಂಡು ಪರಮ ಶಿವೇಂದ್ರರ ಬಳಿ ಓಡಿದ ಕೆಲವರು ಸದಾಶಿವ ಬ್ರಹ್ಮೇಂದ್ರರಿಗೆ ಮತಿಭ್ರಮಣೆಯಾಗಿದೆ, ತಲೆ ಕೆಟ್ಟಿದೆ ಎಂದಿದ್ದರಂತೆ. ಈ ಮಾತನ್ನು ಕೇಳಿದ ಪರಮಶಿವೇಂದ್ರರರು ಅಯ್ಯೊ... ಆತನಿಗೆ ಬಂದ ಮತಿಭ್ರಮಣೆ (ಬ್ರಹ್ಮಜ್ಞಾನ) ನನಗೆ ಉಂಟಾಗಲಿಲ್ಲವೇ...ಎಂದಿದ್ದರಂತೆ. ಬ್ರಹ್ಮಜ್ಞಾನ ಪಡೆದು ಅಲೆಯುತ್ತಿರುವವರಿಗೆ ಪ್ರಪಂಚದ ಅರಿವು ಇರುವುದಿಲ್ಲ. ಹೀಗೆ ಎಲ್ಲೆಂದರಲ್ಲಿ ಮೈ ಮೇಲೆ ವಸ್ತ್ರವೂ ಇಲ್ಲದೇ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರು ನವಾಬನ ಅಂತಃಪುರ ಪ್ರವೇಶಿಸುತ್ತಾರೆ. ರಾಣಿವಾಸದ ಮೂಲಕ ಹಾದುಹೋಗಿದ್ದ ಬ್ರಹ್ಮೇಂದ್ರರನ್ನು ಕಂಡ ನವಾಬ ಕೆಂಡಾಮಂಡಲನಾಗಿ ಬ್ರಹ್ಮೇಂದ್ರರ ಕೈ ಕತ್ತರಿಸುತ್ತಾನೆ. ಆದರೆ ದೇಹಧರ್ಮವನ್ನು ಮೀರಿದ್ದ ಸದಾಶಿವ ಬ್ರಹ್ಮೇಂದ್ರರು ಏನೂ ಆಗೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಸದಾಶಿವ ಬ್ರಹ್ಮೇಂದ್ರರ ಈ ನಿರ್ಲಿಪ್ತ ಸ್ಥಿತಿಯನ್ನು ಕಂಡು ನಡುಗಿದ ನವಾಬ ತುಂಡಾಗಿ ಬ್ರಹ್ಮೇಂದ್ರರ ಕ್ಷಮೆ ಕೇಳಿದ್ದ.

ಸದಾಶಿವಬ್ರಹ್ಮೇಂದ್ರರೇನೋ ಪತ್ನಿ-ಕುಟುಂಬದ ಆದಿಯಾಗಿ ತಮ್ಮ ಗತ ಜೀವನದಿಂದ ಕಳಚಿಕೊಂಡಿದ್ದರು ಸಂನ್ಯಾಸ ಸ್ವೀಕರಿಸಿ, ಆ ಸ್ಥಿತಿಯನ್ನೂ ದಾಟಿ, ಕಾಶಾಯವನ್ನೂ ಕಿತ್ತೊಗೆದು, ಪ್ರಪಂಚದ ಸಂಸರ್ಗವನ್ನು ಅವರು ಬಿಟ್ಟರೂ ಅವರನ್ನು ಈ ಪ್ರಪಂಚ ಬಿಡಲಿಲ್ಲ.  ಪೂರ್ವಾಶ್ರಮದಲ್ಲಿ ವಾದದಲ್ಲಿ ತಮ್ಮ ಬಳಿ ಸೋತಿದ್ದ ವಿದ್ವಾಂಸನೊಬ್ಬ ಇವರನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಉದ್ದೇಶದಿಂದಲೇ ಇವರಿದ್ದಲ್ಲಿಗೇ ಬರುತ್ತಾನೆ. ಬ್ರಹ್ಮೇಂದ್ರರ ಮೌನಕ್ಕೆ ಭಂಗ ಉಂಟುಮಾಡುವುದೇ ಆತನ ಉದ್ದೇಶ, ಗುರುಗಳ ಬಗ್ಗೆ ಕೇಳಿ, ಮಾತನಾಡುವಂತೆ ಮಾಡುವುದು ಆತನ ಉದ್ದೇಶ. " ನೀನು ಸಂನ್ಯಾಸಿಯೇ? ನಿಮ್ಮ ಗುರುಗಳು ಶ್ರೇಷ್ಠ ಗುರುಗಳೋ? ಅವರು ಶ್ರೇಷ್ಠರಾಗಿದ್ದರೆ ಅವರ ಶ್ರೇಷ್ಠತೆಯನ್ನು ಹೇಳು ನೋಡೋಣ ಎನ್ನುತ್ತಾನೆ. ಆತನ ಮಾತನ್ನು ಕೇಳಿದ ಮೇಲೆಯೂ ಸದಾಶಿವ ಬ್ರಹ್ಮೇಂದ್ರರು ಮೌನ ಮುರಿಯುವುದಿಲ್ಲ, ಆದರೆ ಅವರಿದ್ದ ನದಿಯ ಪಕ್ಕದಲ್ಲೇ ಓರ್ವ ಬಟ್ಟೆ ಒಗೆಯುತ್ತಿದ್ದ ಅಗಸನನ್ನು ಕರೆದು ತಲೆ ಮೇಲೆ ಕೈ ಇಡುತ್ತಾರೆ. ಬಟ್ಟೆ ಒಗೆಯುತ್ತಿದ್ದವನ ಬಾಯಲ್ಲಿ ಸಂಸ್ಕೃತ ನಿರರ್ಗಳವಾಗಿ ಮೂಡುತ್ತದೆ. ನಿಂತಲ್ಲೇ  ಸದಾಶಿವ ಬ್ರಹ್ಮೇಂದ್ರರ ಗುರುಗಳ ಶ್ರೇಷ್ಠತೆಯನ್ನು ಸ್ತುತಿಸುವ ಆಶು ಶ್ಲೋಕ ಹೇಳಲು ಪ್ರಾರಂಭಿಸುತ್ತಾನೆ. ಈಗ ಮೌನಿಯಾಗುವ ಸರದಿ ಎರಡನೇ ಬಾರಿಗೆ ಸದಾಶಿವ ಬ್ರಹ್ಮೇಂದ್ರರ ಬಳಿ ಸೋತಿದ್ದ
ವಿದ್ವಾಂಸನದ್ದಾಗಿತ್ತು!. ಮಾನಸ ಸಂಚರರೇ... ಪಿಬರೇ ರಾಮ ರಸಂ.. ಖೇಲತಿ ಮಮ ಹೃದಯೇ... ತುಂಗಾ ತರಂಗೆ...  ಗಾಯತಿ ವನಮಾಲಿ.... ಸೇರಿದಂತೆ ಸದಾಶಿವ ಬ್ರಹ್ಮೇಂದ್ರರಿಂದ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಕೀರ್ತನೆಗಳ ರಚನೆಯಾದದ್ದು ಈ ಘಟನೆಯ ನಂತರವೇ ಎನ್ನುತ್ತಾರೆ ಬ್ರಹ್ಮೇಂದ್ರರ ಕುರಿತು ತಿಳಿದಿರುವ ಅನೇಕ ವಿದ್ವಾಂಸರು. ಈ ಕೀರ್ತನೆಗಳ ರಚನೆಗಳಿಗೂ ಒಂದು ಸ್ವಾರಸ್ಯಕರವಾದ ಹಿನ್ನೆಲೆಯಿದೆ. ಸದಾಶಿವ ಬ್ರಹ್ಮೇಂದ್ರರು ಮೌನ ಸಾಧನೆ ಕೈಗೊಂಡು ಅದೆಷ್ಟೋ ವರ್ಷಗಳು ಕಳೆದಿರುತ್ತದೆ. ಗುರುಗಳೂ ಬ್ರಹ್ಮೈಕ್ಯರಾಗಿರುತ್ತಾರೆ. ಗುರುಗಳು ಮುಕ್ತರಾದರೂ ಅವರ ಉಪದೇಶದಂತೆಯೇ ಮೌನ ವ್ರತ ಮುಂದುವರೆಯುತ್ತಿರುತ್ತದೆ. ಈ ನಡುವೆ ಮತ್ತೋರ್ವ ಶ್ರೇಷ್ಠ ವಿದ್ವಾಂಸರಾಗಿದ್ದ ಶ್ರೀಧರ ಅಯ್ಯವಾಳ್ ಸ್ವಾಮಿ ಎಂಬುವವರು ಸದಾಶಿವ ಬ್ರಹ್ಮೇಂದ್ರರನ್ನು ಭೇಟಿಯಾಗಿ " ಧ್ಯಾನದಲ್ಲಿದ್ದಾಗ ನಿಮ್ಮ ಗುರುಗಳ ಪ್ರೇರಣೆಯಾಯಿತು. ನಿನಗೆ ಮಾತನಾಡಬೇಡ ಎಂದು ಹೇಳಿದ್ದು ವಾದ ಮಾಡಬೇಡ ಎಂದೇ ಹೊರತು ಸದಾ ಮೌನಿಯಾಗಿರು ಎಂದಲ್ಲ. ನೀನು ಕೀರ್ತನೆಗಳನ್ನು ರಚಿಸಬೇಕು, ಆದರೆ ನೀನು ಮಾತನಾಡದೇ ಇರುವುದರಿಂದ ಕೀರ್ತನೆಗಳು ಮೂಡುವುದಿಲ್ಲ ಎಂದು ಪ್ರೇರಣೆ ನೀಡುತ್ತಾರೆ. ಆ ಪ್ರೇರಣೆಯ ಮೂಲಕ ಸದಾಶಿವ ಬ್ರಹ್ಮೇಂದ್ರರ ಧ್ವನಿಯಿಂದ ಮೂಡಿದ ಮೊತ್ತ ಮೊದಲ ಕೀರ್ತನೆಯೇ ಪಿಬರೇ ರಾಮ ರಸಂ... ಎಂಬ ಅದ್ಭುತ ಹಾಡು... ಕೇಳುತ್ತಿದ್ದರೆ ಎಂತಹವನೂ ಒಮ್ಮೆ ವೈರಾಗ್ಯದ ಭಾವನ್ನು ಅನುಭವಿಸಿ ಬರುತ್ತಾನೆ...

ನೆರೂರಿನಲ್ಲಿರುವ ಸದಾಶಿವ ಬ್ರಹ್ಮೇಂದ್ರರ ಅಧಿಷ್ಠಾನಕ್ಕೆ ಪೂಜೆ ಸಲ್ಲಿಸುತ್ತಿರುವ ಶೃಂಗೇರಿ ಜಗದ್ಗುರುಗಳು

ಸದಾಶಿವ ಬ್ರಹ್ಮೇಂದ್ರರ ಮೌನದ ತಪಸ್ಸಿನ ಫಲವಾಗಿ ಕೀರ್ತನೆಗಳಷ್ಟೇ ಅಲ್ಲದೇ ಆತ್ಮ ವಿದ್ಯಾವಿಲಾಸ ಎಂಬ ಅದ್ವೈತ ಗ್ರಂಥವೂ ರಚನೆಯಾಗುತ್ತದೆ. ಅದೇ ಇಂದಿಗೂ ಅದ್ವೈತಿಗಳಿಗೆ, ಆತ್ಮಸಾಕ್ಷಾತ್ಕಾರಕ್ಕಾಗಿ ತಪಿಸುವವರಿಗೆ ದಾರಿ ದೀವಿಗೆಯಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಅವಧೂತ ಸ್ಥಿತಿಗೆ ತಲುಪಿದ್ದ ಶೃಂಗೇರಿಯ ಚಂದ್ರಶೇಖರ ಭಾರತೀ ಸ್ವಾಮಿಗಳು ಸದಾಶಿವ ಬ್ರಹ್ಮೇಂದ್ರರ ಆತ್ಮ ವಿದ್ಯಾ ವಿಲಾಸವನ್ನು ಅನುಸಂಧಾನ ಮಾಡಿಕೊಂಡಿದ್ದರು. ಚಂದ್ರಶೇಖರ ಭಾರತಿ ಸ್ವಾಮಿಗಳಷ್ಟೇ ಅಲ್ಲ. ಅವರ ಗುರುಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳವರೂ, ಉಗ್ರನೃಸಿಂಹ ಭಾರತೀ ಸ್ವಾಮಿಗಳೂ ಸಹ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸುತ್ತಿದ್ದರು. ಸಾಮಾನ್ಯವಾಗಿ ಶೃಂಗೇರಿಯ ಜಗದ್ಗುರುಗಳು ತಮ್ಮ ಪರಂಪರೆಯ ಗುರುಗಳ ಅಧಿಷ್ಠಾನಕ್ಕೆ ನಮಸ್ಕರಿಸಿ ಪೂಜೆ ಸಲ್ಲಿಸುವುದನ್ನು ಹೊರತುಪಡಿಸಿದರೆ ಪರಂಪರೆಗೆ ಸಂಬಂಧಪಡದ ಯತಿಗಳಾಗಲೀ, ಅವಧೂತರಿಗಾಗಲೀ ನಮಸ್ಕರಿಸುವ ಅಥವಾ ಅಧಿಷ್ಠಾನಗಳಿಗೆ ನಮಸ್ಕರಿಸುವ ಪದ್ಧತಿ ಹೊಂದಿಲ್ಲ.

ವಿಜಯ ಯಾತ್ರೆ ಕೈಗೊಂಡಾಗ ತಮಿಳುನಾಡಿನ ನೆರೂರಿನ ಆಸುಪಾಸಿನ ಪ್ರದೇಶಗಳಿಗೆ ಭೇಟಿ ನೀಡಿದರೆ ತಪ್ಪದೇ ನೆರೂರಿನಲ್ಲಿರುವ ಸದಾಶಿವಬ್ರಹ್ಮೇಂದ್ರರ ಸಮಾಧಿ(ಅಧಿಷ್ಠಾನ)ಕ್ಕೆ ತೆರಳಿ ಸ್ವತಃ ಪೂಜೆ ನೆರವೇರಿಸುತ್ತಾರೆ.

ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ತಮಿಳುನಾಡಿನಲ್ಲಿ ವಿಜಯಯಾತ್ರೆಯ ವೇಳೆ ತಿರುಚ್ಚಿಯ ಸಮೀಪ ಪಯಣಿಸುತ್ತಿದ್ದಾಗ ಅವರ ಪಲ್ಲಕ್ಕಿ ಹಠಾತ್ತನೆ ನಿಂತು ಬಿಟ್ಟಿತು. ಪಲ್ಲಕ್ಕಿ ಹೊತ್ತವರು ತಮ್ಮನ್ಯಾವುದೋ ಶಕ್ತಿ ಎಳೆದು
ನಿಲ್ಲಿಸಿದೆ ಎಂದು ಅಳಲು ತೋಡಿಕೊಂಡಾಗ ಧ್ಯಾನಸ್ಥರಾದ ಗುರುಗಳಿಗೆ ಸದಾಶಿವ ಬ್ರಹ್ಮೇಂದ್ರರರ ಶಕ್ತಿ ಅರಿವಾಗುತ್ತದೆ. ಸಮಾಧಿಯ ದರ್ಶನ ಪಡೆದು ಮೂರು ದಿನ ಅಲ್ಲೇ ಉಪವಾಸವಿದ್ದು ಧ್ಯಾನಾವಸ್ಥೆಯಲ್ಲಿದ್ದರು. ಕೊನೆಗೆ ಸ್ವತಃ ಸದಾಶಿವ ಬ್ರಹ್ಮೇಂದ್ರರು ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳೊಂದಿಗೆ ಮಾತನಾಡಿದ್ದರಂತೆ. ಅವರೊಂದಿಗೆ ಮಾತಾಡುತ್ತಿರುವ ದನಿ ಮಾತ್ರ ಕೇಳಿಸುತ್ತಿತ್ತು. ಆದರೆ ಯಾರೂ ಕಾಣಿಸುತ್ತಿರಲಿಲ್ಲ. ಹೀಗೆ ಬ್ರಹ್ಮೇಂದ್ರರ ದರ್ಶನ ಪಡೆದ ಶಿವಾಭಿನವ ನೃಸಿಂಹ ಭಾರತಿಗಳು ಸದಾಶಿವ ಬ್ರಹ್ಮೇಂದ್ರರನ್ನು ಕುರಿತು ಸದಾಶಿವೇಂದ್ರ ಸ್ತವ ಹಾಗೂ ಸದಾಶಿವೇಂದ್ರ ಪಂಚರತ್ನ ಎಂಬ ಶ್ಲೋಕಗಳನ್ನೂ ರಚಿಸಿಸಿದ್ದಾರೆ. ಶೃಂಗೇರಿಯ ಪರಂಪರೆಯಲ್ಲಿ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಸ್ವಾಮಿಗಳು ಅಭಿನವ ’ಶಂಕರ’ ಎಂದೇ ಖ್ಯಾತರಾದವರು, ಯತಿಶ್ರೇಷ್ಠರು, ಅಂತಹ ಯತಿಶ್ರೇಷ್ಠರೂ ಸದಾಶಿವ ಬ್ರಹ್ಮೇಂದ್ರರನ್ನು ಆರಾಧಿಸಿ ಮುಮುಕ್ಷತ್ವಕ್ಕಾಗಿ ಪ್ರಾರ್ಥಿಸಿ ಅವರ ಕುರಿತು ಶ್ಲೋಕಗಳನ್ನು ರಚಿಸಿದ್ದರೆಂದರೆ ಬ್ರಹ್ಮೇಂದ್ರರ ಜೀವನ್ಮುಕ್ತ ಸ್ಥಿತಿಯ ತೀವ್ರತೆ ನಮಗೆ ಅರಿವಾದೀತು. ಹಾಗಾಗಿಯೇ ಪ್ರಾರಂಭದಲ್ಲಿ ಹೇಳಿದ್ದು, ಸಂತನಾಗಿ, ಬ್ರಹ್ಮಜ್ಞಾನಿಗಳಿಗೆ ಇಂದ್ರಸಮಾನನಾಗಿ ಸದಾಶಿವ ಬ್ರಹ್ಮೇಂದ್ರನೆಂಬ ಅಭಿದಾನದಿಂದ ಜೀವನ್ಮುಕ್ತರಾದರೆಂದು. ಸದಾಶಿವ ಬ್ರಹ್ಮೇಂದ್ರರು
 ನೆರೂರಿನಲ್ಲಿ ಸಜೀವ ಸಮಾಧಿಯಾಗಿರಬಹುದು, ಆದರೆ ಜ್ಞಾನಕ್ಕಾಗಿ ಹಪಹಪಿಸುವವರಿಗೆ, ಮುಮುಕ್ಷತ್ವಕ್ಕಾಗಿ ಪ್ರಯತ್ನ ಮಾಡುವವರಿಗೆ ಇಂದಿಗೂ ದಾರಿದೀಪವಾಗಿದೆ.


(ಮಾಸಪತ್ರಿಕೆ ಅಸೀಮಾದಲ್ಲಿ ಪ್ರಕಟಿತ ಲೇಖನ)

Saturday 28 October 2017

ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕು ಕಸಿಯುತ್ತಿದೆ ಚೀನಾ, ಕಮ್ಯುನಿಸ್ಟರದ್ದು ಮಾತ್ರ ಜಾಣ ಮೌನ!


ಪ್ರಜಾಪ್ರಭುತ್ವ, ಸಮಾನತೆ, ಧಾರ್ಮಿಕ ಸಹಿಷ್ಣುತೆಗಳನ್ನೇ ಮೈವೆತ್ತಿದ ಕಮ್ಯುನಿಷ್ಟರ ಚೀನಾ ತನ್ನದೇ ಪ್ರಾಂತ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ, ಅರ್ಥಾತ್ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ನ್ನು ಪೊಲೀಸರಿಗೆ ಒಪ್ಪಿಸಲು ಒತ್ತಡ ಹೇರಿ, ಧಾರ್ಮಿಕ ’ಸಹಿಷ್ಣುತೆ’ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಏನೇ ಆದರೂ ಕಮ್ಯುನಿಷ್ಟರ ತತ್ವಗಳು, ವಿಶ್ವಮಾನವತೆಯ ಕಲ್ಪನೆ ಉಪದೇಶಗಳಿಗಷ್ಟೇ ಸೀಮಿತ, ಭಯೋತ್ಪಾದನೆಯ ಬಿಸಿ ತಮ್ಮ ಬುಡಕ್ಕೆ ಬಂದಾಗ ಕಮ್ಯುನಿಷ್ಟರ ಸಧ್ಯದ ಹೆಡ್ ಕ್ವಾರ್ಟ್ರಸ್ ಚೀನಾದಲ್ಲೇ ಈ ತತ್ವಗಳಿಗೆ ಜಾಗವಿರುವುದಿಲ್ಲವಷ್ಟೇ.

ತನ್ನ ನೆಲದ ಹೊರಗೆ ನಡೆಯುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆ ಖಂಡಿಸಲು ಮೀನಾ-ಮೇಷ ಎಣಿಸಿ ಅಡ್ಡಗಾಲು ಹಾಕುವ, ನೆರೆ ರಾಷ್ಟ್ರದ ಪ್ರತ್ಯೇಕತಾವಾದದ ಬೆಂಕಿಯ ಕಿಡಿಯಲ್ಲಿ ಚಳಿ ಕಾಯಿಸಿಕೊಳ್ಳುವ ಚಾಳಿ ಹೊಂದಿರುವ ಚೀನಾ ಸ್ವತಃ ಲಾಗಾಯ್ತಿನಿಂದಲೂ ಪ್ರತ್ಯೇಕತಾವಾದವನ್ನು ತನ್ನೊಡಲಲ್ಲಿಟ್ಟುಕೊಂಡೇ ಜೀವಿಸಿದೆ. ಕಾರಣ ಇಸ್ಲಾಮಿಕ್ ಬ್ರದರ್ ಹುಡ್ ಅಥವಾ ಪ್ಯಾನ್ ಇಸ್ಲಾಮ್ ನ ಭಯ ಎಂದು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಚೀನಾದವರು ಭಯಪಡುತ್ತಿರುವ ಆ ಪ್ರತ್ಯೇಕತಾವಾದದ ಪ್ರದೇಶಕ್ಕೆ ಕ್ಸಿನ್ ಜಿಯಾಂಗ್ ಎಂದು ಹೆಸರು. ಇದನ್ನು ಈಸ್ಟ್‌ ತುರ್ಕಿಸ್ತಾನ್‌ ಎಂದೂ ಕರೆಯುತ್ತಾರೆ.

ಕ್ಸಿನ್ ಜಿಯಾಂಗ್ ಪ್ರದೇಶ ಹ್ಯಾನ್ ಚೀನಿಯರು, ಟರ್ಕಿಕ್, ಮಂಗೋಲಿಯನ್ನರು, ಟಿಬೇಟ್ ನ ಸಾಮ್ರಾಜ್ಯದವರು, ಉಯ್ಘರ್  ಖಗನೇಟ್ ಸೇರಿದಂತೆ ಅನೇಕ ಸಾಮ್ರಾಜ್ಯದ ರಾಜರು ಆಳ್ವಿಕೆ ನಡೆಸಿರುವ ಇತಿಹಾಸ ಹೊಂದಿದೆ. 1759 ರಲ್ಲಿ ಕ್ವಿಂಗ್ ಸಾಮ್ರಾಜ್ಯ ಈ ಪ್ರದೇಶವನ್ನು ವಶಪಡಿಸಿಕೊಂಡ ನಂತರ ಕ್ಸಿನ್ ಜಿಯಾಂಗ್ ಎಂಬ ಹೆಸರು ಬಂದಿತ್ತು. ಕ್ವಿಂಗ್ ಸಾಮ್ರಾಜ್ಯದ ಅವಧಿಯಲ್ಲಿಯೂ ಟಿಯಾನ್ಸಾನ್ ಪರ್ವತಗಳ ಉತ್ತರದಲ್ಲಿದ್ದ ಬೌದ್ಧ ಮಂಗೋಲ್   ಕ್ಸಿನ್ ಜಿಯಾಂಗ್ ಹಾಗೂ ಟಿಯಾನ್ಸಾನ್ ಪರ್ವತಗಳ ದಕ್ಷಿಣದಲ್ಲಿ ಟರ್ಕಿಕ್ ಮಾತನಾಡುವ ಮುಸ್ಲಿಮರ ನಡುವೆ ಭಿನ್ನತೆ ಇದ್ದಿದ್ದರಿಂದ ಪ್ರತ್ಯೇಕವಾದ ಆಡಳಿತವನ್ನು ನಡೆಸಲಾಗುತ್ತಿತ್ತು. ಆದರೆ 1884 ರಲ್ಲಿ ಕ್ವಿಂಗ್ ಸಾಮ್ರಾಜ್ಯ ಈ ಪ್ರದೇಶವನ್ನು ಒಗ್ಗೂಡಿಸಿ ಕ್ಸಿನ್ ಜಿಯಾಂಗ್ ಎಂಬ ಹೆಸರು ನೀಡಿತ್ತು. ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿದ್ದ ಟರ್ಕಿಕ್ ಮಾತನಾಡುವ ಮುಸ್ಲಿಮರು ಬಹುಸಂಖ್ಯಾತರಾಗಿದ್ದರು. ಆದರೆ ಟಿಬೇಟ್, ತೈವಾನ್ ನಂತಹ ಸಣ್ಣ ಸಣ್ಣ ರಾಷ್ಟ್ರಗಳನ್ನು ಕಬಳಿಸಿ, ದಕ್ಷಿಣ ಚೀನಾ ಸಮುದ್ರದಲ್ಲೂ ತನ್ನ ಕಬಂಧಬಾಹುಗಳಿಂದ ಏಕಚಕ್ರಾಧಿಪತ್ಯ ಸ್ಥಾಪಿಸಲು ಹೆಣಗುತ್ತಿರುವ ಚೀನಾ ಕ್ಸಿನ್ ಜಿಯಾಂಗ್ ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು, ಅಲ್ಲಲ್ಲ, ಬಹುಸಂಖ್ಯಾತರಾಗಿದ್ದವರನ್ನು ಅಲ್ಪಸಂಖ್ಯಾತರನ್ನಾಗಿಸಿ, ಈಗ ಸಂಖ್ಯೆಯೇ ಇಲ್ಲದಂತೆ ಮಾಡಲು ಯತ್ನಿಸುತ್ತಿರುವುದಕ್ಕೆ ಈಗ ಸುದ್ದಿಯಲ್ಲಿರುವ ಅಂಶ ಅತ್ಯುತ್ತಮ ಉದಾಹರಣೆ.

ಈ ಹಿಂದೆಯೂ ಸಹ ಚೀನಾ ಕ್ಸಿನ್ ಜಿಯಾಂಗ್ ನಲ್ಲಿರುವ ಇಸ್ಲಾಮ್ ಧರ್ಮೀಯರ ಆಚರಣೆ ಹಾಗೂ ಸಂಪ್ರದಾಯಗಳ ವಿರುದ್ಧ ಅನೇಕ ಬಾರಿ ಕಠಿಣ ನಿಲುವು ತೆಗೆದುಕೊಂಡಿತ್ತು. ಈಗ ಅದು ಮತ್ತಷ್ಟು ಕಠಿಣವಾಗಿರುವುದಕ್ಕೆ ಮತ್ತೆ ಸುದ್ದಿಯಲ್ಲಿದೆಯಷ್ಟೇ. ಮಂಗೋಲಿಯಾ, ಕಝಕಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತದ ಜಮ್ಮು-ಕಾಶ್ಮೀರದೊಂದಿಗೆ ಗಡಿ ಹಂಚಿಕೊಂಡಿರುವ (ತಾಗಿದಂತೆ ಇರುವ) ಕ್ಸಿನ್ ಜಿಯಾಂಗ್ ಆಯಕಟ್ಟಿನ ದೃಷ್ಟಿ, ಆರ್ಥಿಕತೆ, ನೈಸರ್ಗಿಕ ಸಂಪನ್ಮೂಲಗಳು ಸೇರಿದಂತೆ ಹಲವು ಪ್ರಮುಖ ಅಂಶಗಳ ಕಾರಣದಿಂದ ಅತ್ಯಂತ ಮಹತ್ವ ಪಡೆದಿದೆ. ಚೀನಾಗಂತೂ ಈ ಪ್ರದೇಶ ಒಂದು ರೀತಿಯ ಜೀವ ಸೆಲೆ ಇದ್ದಂತೆ ಎಂದರೂ ತಪ್ಪಾಗಲಾರದು. ನೈಸರ್ಗಿಕ ಸಂಪನ್ಮೂಲಗಳ ದೃಷ್ಟಿಯಿಂದಲೂ ಅಥವಾ ಪ್ರತ್ಯೇಕತಾವಾದದ ಸಮಸ್ಯೆಯ ದೃಷ್ಟಿಯಿಂದಲೂ ಚೀನಾದ ಪರಮಾಪ್ತನ ಸಮಕ್ಕೆ ಹೋಲಿಸುವುದಾದರೆ ಹೆಚ್ಚು ಕಡಿಮೆ ಪಾಕಿಸ್ತಾನಕ್ಕೆ ಬಲೂಚಿಸ್ಥಾನ ಹೇಗೋ ಚೀನಾಗೆ ಕ್ಸಿನ್ ಜಿಯಾಂಗ್ ಹಾಗೆ ಎನ್ನಬಹುದು.

ಹೇಗೆ ಪಾಕಿಸ್ತಾನಕ್ಕೆ ಬಲೂಚಿಸ್ಥಾನದಿಂದ ಹೆಚ್ಚು ಪ್ರಮಾಣದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಇದೆಯೋ ಹಾಗೆಯೇ ಚೀನಾದಲ್ಲಿ ಆ ದೇಶದ ಮೂರನೇ ಒಂದರಷ್ಟು ನೈಸರ್ಗಿಕ ಅನಿಲ ಹಾಗೂ ತೈಲ ನಿಕ್ಷೇಪಗಳನ್ನು, ಅತಿ ಹೆಚ್ಚು ಪ್ರಮಾಣದ ಚಿನ್ನ, ಯುರೇನಿಯಂ ಹಾಗೂ ಇನ್ನಿತರ ಖನಿಗಳ ನಿಕ್ಷೇಪ ಇರುವುದೂ ಕ್ಸಿನ್ ಜಿಯಾಂಗ್ ನಲ್ಲೇ. ನವೀಕರಿಸಬಹುದಾದ ಇಂಧನದ ಸಾಮರ್ಥ್ಯದಲ್ಲೂ ಕ್ಸಿನ್ ಜಿಯಾಂಗ್ ಏನು ಕಡಿಮೆ ಇಲ್ಲ. ಸೋಲಾರ್, ವಿದ್ಯುತ್, ಪವನಶಕ್ತಿ ವಿದ್ಯುತ್, ಪರಮಾಣು ಶಕ್ತಿಯನ್ನು ಉತ್ಪಾದಿಸುವುದರಲ್ಲಿಯೂ ಕ್ಸಿನ್ ಜಿಯಾಂಗ್ ಅತಿಮುಖ್ಯವಾದ ಪ್ರದೇಶ. ಚೀನಾದ ಅಗತ್ಯತೆಗಳು ಹಾಗೂ ಅಭಿವೃದ್ಧಿಯಲ್ಲಿ ಕ್ಸಿನ್ ಜಿಯಾಂಗ್ ನ ಸಿಂಹಪಾಲಿನ ಪಟ್ಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ಐತಿಹಾಸಿಕ ಸಿಲ್ಕ್ ರೋಡ್ ಉದ್ದಕ್ಕೂ ಕ್ಸಿನ್ ಜಿಯಾಂಗ್ ಪ್ರದೇಶ ಹರಡಿಕೊಂಡಿರುವುದು ಚೀನಾ ಕಮ್ಯುನಿಷ್ಟರ ಬೆಲ್ಟ್ ಆಂಡ್ ರೋಡ್(ಒಬಿಒಆರ್) ಯೋಜನೆಗೆ ಸ್ವಾಭಾವಿಕವಾಗಿ ದೊರೆತ ವರದಾನದಂತಾಗಿದೆ. "ಹುಲ್ಲು ಕಡ್ಡಿಯೂ ಬೆಳೆಯದ" ಭಾರತ-ಚೀನಾ ಗಡಿಯ ಲದ್ದಾಕ್-ಅರುಣಾಚಲಪ್ರದೇಶದ ಜಾಗವನ್ನು ಅತಿಕ್ರಮಣ ಮಾಡಿ ಕಣ್ಣುಹಾಕಿದ್ದ ಚೀನಾ, ಒಟ್ಟು ಕಲ್ಲಿದ್ದಲಿನ ಪೈಕಿ ಶೇ.40ರಷ್ಟು ಭಾಗ, ತೈಲ ನಿಕ್ಷೇಪಗಳ ಪೈಕಿ ಶೇ.20 ರಷ್ಟನ್ನು ಹೊಂದಿರುವ ನೈಸರ್ಗಿಕ ಖಜಾನೆ,  ಆಯಕಟ್ಟಿನ ಜಾಗದಂತಿರುವ ಕ್ಸಿನ್ ಜಿಯಾಂಗ್ ನಲ್ಲಿ ತನ್ನವರಲ್ಲದೇ ಅನ್ಯ ಧರ್ಮೀಯರು ಇದ್ದರೆ ಹೇಗೆ ತಾನೆ ಸಹಿಸುತ್ತೆ? ಅಲ್ಲಿ ತನ್ನ ಆಧಿಪತ್ಯ ನಡೆಸದೇ ಹೇಗೆ ತಾನೆ ಇರಲು ಸಾಧ್ಯ?

ತಾನು ಕಣ್ಣಿಟ್ಟ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಚೀನಾ ಪ್ರತಿಯೊಂದನ್ನೂ ವ್ಯವಸ್ಥಿತವಾಗಿಯೇ ಮಾಡುತ್ತೆ. ಮತ್ತೊಂದು ಪ್ರದೇಶದಲ್ಲಿ ತನಗೆ ವಿರುದ್ಧವಾಗಿರುವುದಕ್ಕಿಂತ ಪ್ರಾಬಲ್ಯ ಮೆರೆಯಲು population transfer policy ಚೀನಾ ಲಗಾಯ್ತಿನಿಂದ ಪ್ರಯೋಗಿಸಿರುವ ಅಸ್ತ್ರ. ಅದೇ ಅಸ್ತ್ರವನ್ನು ಪ್ರಯೋಗಿಸಿಯೇ ಚೀನಾ ಟಿಬೆಟ್ ನಲ್ಲಿ ದಬ್ಬಾಳಿಕೆ ನಡೆಸಲು ಸಹಕಾರಿಯಾಗಿದ್ದೂ ಸಹ ತನ್ನ ಜನಸಂಖ್ಯೆಯನ್ನು ಹೆಚ್ಚಿಸಿಕೊಂಳ್ಳುವ ಈ  population transfer policyಯೇ. population transfer policy ಮಾಡುವಾಗ ಬೇರೆ ಪ್ರದೇಶಗಳಿಗೆ ಕಳಿಸುವವರನ್ನು ಕೃಷಿಕರಿಂದ ಕಲಿಯುವುದಕ್ಕಾಗಿ ಎಂಬ ನೆಪವೊಡ್ಡಿ ಕಳಿಸಲಾಗುತ್ತದೆ. ನಂತರ ಹೋದವರಿಗೆ ವಾಪಸ್ ಬರಲು ಅನುಮತಿ ನಿರಾಕರಿಸಲಾಗುತ್ತದೆ. ಇದೇ ಮಾದರಿಯಲ್ಲಿ ಚೀನಾ ಮುಸ್ಲಿಂ ಬಾಹುಳ್ಯವಿದ್ದ ಕ್ಸಿನ್ ಜಿಯಾಂಗ್ ನಲ್ಲಿ ಹ್ಯಾನ್ ಜನಾಂಗೀಯ ಗುಂಪನ್ನು ವ್ಯವಸ್ಥಿತವಾಗಿ ಕ್ಸಿನ್ ಜಿಯಾಂಗ್ ನಲ್ಲಿ ಸೇರಿಸಿ, ಮುಸ್ಲಿಮರಿಗಿಂತ ಹ್ಯಾನ್ ಜನಾಂಗದವರು ಬಹುಸಂಖ್ಯಾತರಾಗುವಂತೆ ಮಾಡಿದೆ. ಅನ್ಯಮತೀಯರು ಅಥವಾ ತಾನು ಕಣ್ಣುಹಾಕಿದ ಪ್ರದೇಶದಲ್ಲಿ ವಿದೇಶಿಯರು (ಟಿಬೆಟ್) ಹೆಚ್ಚಿರುವ ಪ್ರದೇಶದಲ್ಲಿ ತನ್ನವರನ್ನು ಬಹುಸಂಖ್ಯಾತರನ್ನಾಗಿಸುವುದರಲ್ಲಿ population transfer policyಯೇ  ಚೀನಾದ ಮೊದಲ ಆಯ್ಕೆಯಾಗಿರುತ್ತದೆ,  ಏಕೆಂದರೆ ಚೀನಾದ ಬಹುಸಂಖ್ಯಾತರಾಗಿರುವ ಹ್ಯಾನ್ ಜನಾಂಗದವರು ಕ್ಸಿನ್ ಜಿಯಾಂಗ್ ನಲ್ಲಿ ಬಹುಸಂಖ್ಯಾತರಾದರೆ ಆ ಪ್ರದೇಶವನ್ನು ತನ್ನಿಷ್ಟಕ್ಕೆ ತಕ್ಕಂತೆ ಆಳುವುದು ಸುಲಭ.

ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಂಡು ಕೈಗಾರೀಕರಣವನ್ನು ಮುಂದುವರೆಸುವುದು ಚೀನಾದ ಆಸಕ್ತಿಗಳಲ್ಲಿ ಮುಖ್ಯವಾಗಿದ್ದು, ವಿದೇಶಿ ಸಾಮ್ರಾಜ್ಯಶಾಹಿ ಪ್ರಾಬಲ್ಯ ಹಾಗೂ  1839-1949 ರ ಸೆಂಚುರಿ ಆಫ್ ಹ್ಯುಮಿಲಿಯೇಷನ್ ನ ಅವಧಿಯ ಕುತಂತ್ರಗಳು ಚೀನಾ ಕಮ್ಯುನಿಷ್ಟ್ ಪಕ್ಷ(ಸಿಸಿಪಿ) ಕ್ಕೆ ಇರುವ ಪ್ರಾದೇಷಿಕ ಸಮಗ್ರತೆ ಹಾಗೂ ವಿಸ್ತರಣಾವಾದದ ಗೀಳಿನ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಶೇ.49 ರಷ್ಟಿದ್ದ ಹ್ಯಾನ್ ಜನಾಂಗೇತರ ಉಯ್ಘರ್  ಸಮುದಾಯದ ಮುಸ್ಲಿಮರು ಬಹುಸಂಖ್ಯಾತರಾಗಿದ್ದಷ್ಟೂ ದಿನ ಪ್ಯಾನ್ ಇಸ್ಲಾಂ ಅಡಿಯಲ್ಲಿ ಇಸ್ಲಾಂ ಧರ್ಮದವರೆಲ್ಲಾ ಒಂದಾಗಿ ಪ್ರತ್ಯೇಕತಾವಾದವನ್ನು ತೀವ್ರಗೊಳಿಸಿದರೆ, ಚೀನಾಗೆ ತನ್ನ ಹಿಡಿತದಲ್ಲಿರುವ ಸಂಪತ್ಭರಿತವಾದ ಪ್ರದೇಶವನ್ನು ಕಳೆದುಕೊಳ್ಳುವ ಭೀತಿ ಇದೆ. ಅಷ್ಟೇ ಅಲ್ಲದೇ ಚೀನಾ ಈಗಾಗಲೇ ಸಿಪಿಇಸಿ ಯೋಜನೆಗಾಗಿ 45 ಬಿಲಿಯನ್ ಡಾಲರ್ ನಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದು, ಒನ್ ಬೆಲ್ಟ್, ರೋಡ್ ಯೋಜನೆಗೆ 900 ಬಿಲಿಯನ್ ಡಾಲರ್ ನಷ್ಟು ಹಣವನ್ನು ಹೂಡಿಕೆ ಮಾಡಲು ಸಿದ್ಧತೆ ನಡೆಸಿದೆ. ಈ ಹಂತದಲ್ಲಿ ಚೀನಾ ಭಾಷೆಯನ್ನೇ ಮಾತನಾಡದ ಟರ್ಕಿಕ್ ಮಾತೃಭಾಷೆ, ಅರೇಬಿಕ್ ಲಿಪಿಯನ್ನು ಬಳಕೆ ಮಾಡುತ್ತಿರುವ ಉಯ್ಘರ್  ಸಮುದಾಯದ ಪ್ರತ್ಯೇಕತಾವಾದ ಚೀನಾವನ್ನು ಅದೆಷ್ಟು ಭೀತಗೊಳಿಸಿರಬೇಡ?

ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಕೇವಲ ಉಯ್ಘರ್  ಮುಸ್ಲಿಮರು ಬಹುಸಂಖ್ಯಾತರಷ್ಟೇ ಅಂದರೆ ಶೇ.45.84 ರಷ್ಟು, ಉಯ್ಘರ್  ನೊಂದಿಗೆ ಹುಯಿ ಮುಸ್ಲಿಂ ಸಮುದಾಯದವರು ಶೇ.4.51 ರಷ್ಟಿದ್ದು, ಹಾಗೂ ಕಝಕ್ ಗಳು ಶೇ.6.50 ರಷ್ಟಿದ್ದರೆ, ಹ್ಯಾನ್ ಸಮುದಾಯದವರು ಶೇ.40.48 ರಷ್ಟು, ಇತರರು ಶೇ.2.67 ರಷ್ಟಿದ್ದಾರೆ. ನೋಡಲು ತಮ್ಮಂತೆ ಒಂದೇ ರೀತಿ ಇದ್ದರೂ ಆಚರಣೆ ಮಾಡುವ ಧರ್ಮದಲ್ಲಿ ಬೇರೆ, ಬಳಕೆ ಮಾಡುವ ಭಾಷೆಯಲ್ಲಿ ಬೇರೆಯಾಗಿರುವ ಬಹುಸಂಖ್ಯಾತ ಉಯ್ಘರ್  ಸಮುದಾಯ ಎಂದಾದರೂ ತಮಗೆ ಮಗ್ಗುಲ ಮುಳ್ಳು ಎಂದೇ ಭಾವಿಸಿದ್ದ ಚೀನಾ ಚಾಣಾಕ್ಷತನದಿಂದಲೇ ತನ್ನ ಅಡ್ಡಿಯನ್ನು ನಿವಾರಿಸಿಕೊಳ್ಳಲು ಯತ್ನಿಸುತ್ತಿದೆ. ಏಕೆಂದರೆ ನೇರಾ ನೇರಾವಾಗಿ ಇಡಿಯ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಳ್ಳದೇ ಉಯ್ಘರ್  ಸಮುದಾಯವನ್ನು ಮಾತ್ರ ಪ್ರಮುಖವಾಗಿ ಟಾರ್ಗೆಟ್ ಮಾಡಿದೆ. ಉಯ್ಘರ್  ಸಮುದಾಯವನ್ನು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಹೇಳಿದ್ದು, ಕ್ಸಿನ್ ಜಿಯಾಂಗ್ ನಲ್ಲಿ 2 ನೇ ದೊಡ್ಡ ಮುಸ್ಲಿಂ ಸಮುದಾಯವಾಗಿರುವ ಹುಯಿ-ಉಯ್ಘರ್  ಪ್ರತ್ಯೇಕತಾವಾದಕ್ಕೆ ಒಗೂಡದಂತೆ ಎಚ್ಚರವಹಿಸಿದೆ. ಎಷ್ಟರ ಮಟ್ಟಿಗೆ ಅಂದರೆ ಅಲ್ಲಿನ ಉಯ್ಘರ್ ಮುಸ್ಲಿಮರು ತಮ್ಮ ಭಾಷೆಯ ಸಾಹಿತ್ಯವನ್ನು ಅಭ್ಯಾಸ ಮಾಡುವಂತಿಲ್ಲ, ಮಾತನಾಡುವಂತಿಲ್ಲ, ಕೊನೆಗೆ ತಮ್ಮ ಮಕ್ಕಳಿಗೆ ಇಸ್ಲಾಮ್ ನ್ನು ಧ್ವನಿಸುವ ಹೆಸರುಗಳನ್ನೂ ಇಡುವಂತಿಲ್ಲ!  ಅಂದರೆ, ಹಿಂದಿನ ಸೋವಿಯತ್ ಯೂನಿಯನ್ ನಲ್ಲಿ ಟರ್ಕಿಯ ಅಲ್ಪಸಂಖ್ಯಾತರು, ಆಧುನಿಕ ರಷ್ಯಾದಲ್ಲಿ ಚೆಚೆನ್ ಗಳು ಇಸ್ರ‍ೆಲ್/ ಪ್ಯಾಲೆಸ್ಟೇನ್ ನಲ್ಲಿ ಪ್ಯಾಲೆಸ್ಟೇನ್ ಗಳು ಇಸ್ಲಾಂ ನ್ನು ಒಗ್ಗೂಡುವಿಕೆಯ ಮಂತ್ರವಾಗಿಸಿಕೊಂಡದ್ದು ಕ್ಸಿನ್ ಜಿಯಾಂಗ್ ನ ನೆಲದಲ್ಲೂ ಆಗಬಾರದೆಂಬುದು ಚೀನಾದ ಉದ್ದೇಶವಾಗಿರಬಹುದು. ಅಷ್ಟೇ ಅಲ್ಲದೇ ಚೀನಾ ಇಸ್ಲಾಂ ಧರ್ಮದ ಪಂಗಡಗಳು ಒಗ್ಗೂಡದಂತೆ ಎಚ್ಚರಿಕೆ ವಹಿಸಿದ್ದು, ಕ್ಸಿನ್ ಜಿಯಾಂಗ್ ಮೇಲೆ ಉಯ್ಘರ್  ಪ್ರಾಬಲ್ಯವನ್ನು ದುರ್ಬಲಗೊಳಿಸಲು, ಆ ಪ್ರಾಂತ್ಯದಲ್ಲಿ ಚೀನಾ ಚೀನಾದ ಕಮ್ಯುನಿಷ್ಟ್ ಪಕ್ಷ  13 ಸ್ವಾಯತ್ತ ಅಲ್ಪಸಂಖ್ಯಾತರನ್ನು ಗುರುತಿಸಿದೆ. ಹ್ಯಾನ್ ಗಿಂತ ಭಿನ್ನವಾದ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಸಮುದಾಯ ಎಂದು ಸಿಸಿಪಿಗೆ ಮನವರಿಕೆಯಾದಾಗ ಆ ಸಮುದಾಯಕ್ಕೆ ತನ್ನದೇ ಸರ್ಕಾರವನ್ನು ನಿಯುಕ್ತಿಗೊಳಿಸುವ ಸ್ವಾಯತ್ತತೆಯನ್ನು ನೀಡಲಾಗುತ್ತದೆ.

ಸಧ್ಯಕ್ಕೆ ಉಯ್ಘರ್  ಈ ರೀತಿಯ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವರ್ಗವಾಗಿದ್ದು, "ಕ್ಸಿನ್ ಜಿಯಾಂಗ್ ಗೆ  ಕ್ಸಿನ್ ಜಿಯಾಂಗ್ ಸ್ವಾಯತ್ತ ಪ್ರದೇಶವೆಂಬ ಅಧಿಕೃತ ಹೆಸರಿದೆ, ಆದರೆ ಉಯ್ಘರ್  ಸಮುದಾಯದವರು ಮಾತ್ರ ರಾಜಕೀಯವಾಗಿ ಪ್ರಬಲರಾಗಿಲ್ಲ. ಚೀನಾದ ಈ ಯೋಜನೆ ಕೇವಲ ಹೆಸರಿಗಷ್ಟೇ ಸ್ವಾಯತ್ತವಾಗಿದ್ದು, ಪ್ರತಿ ಹಂತದಲ್ಲಿಯೂ ಸ್ವಾಯತ್ತತೆಯ ಅಧಿಕಾರವನ್ನು ಮೊಟಕುಗೊಳಿಸುತ್ತದೆ. ಸ್ವಾಯತ್ತ ಅಲ್ಪಸಂಖ್ಯಾತ ಸಮುದಾಯದವರು ಹಾಗೂ ಅದಕ್ಕೆ ಸಂಬಂಧಿಸಿದ ನಾಯಕರು ಉಳಿಯಬೇಕೆಂದರೆ ಸಿಸಿಪಿಯ ಬೆಂಬಲವನ್ನು ಪಡೆಯುವುದು ಅತ್ಯಗತ್ಯ. ಒಂದು ವೇಳೆ ಸ್ವಾಯತ್ತ ಪ್ರಾಂತ್ಯದ ಮೇಲೆ ಚೀನಾ ಕಮ್ಯುನಿಷ್ಟ್ ಪಕ್ಷದ ನಿಯಂತ್ರಣವನ್ನು ನಿರಾಕರಿಸಿದರೆ ಮಾತ್ರ ಉಯ್ಘರ್  ಗಳಿಗೆ ರಾಜಕೀಯವಾಗಿ, ಆರ್ಥಿಕವಾಗಿ ಪ್ರಾಬಲ್ಯ ಮೆರೆಯುವ ಅವಕಾಶ ಇರುತ್ತದೆ. ಆದರೆ ಅಲ್ಪಸಂಖ್ಯಾತರ ವಿರುದ್ಧ ಅಲ್ಪಸಂಖ್ಯಾತರನ್ನೇ ಎತ್ತಿಕಟ್ಟಿ ಚೀನಾ ಮಾತ್ರ ಕ್ಸಿನ್ ಜಿಯಾಂಗ್ ಮೇಲೆ ಯಾರ ಹಿಡಿತ ಇರಬಾರದು ಎಂದುಕೊಂಡಿತ್ತೋ ಅದನ್ನು ಸಾಧಿಸಿಕೊಳ್ಳುತ್ತಲೇ ಇದೆ.

ಕ್ಸಿನ್ ಜಿಯಾಂಗ್ ನಲ್ಲಿರುವ ಮುಸ್ಲಿಮರನ್ನು ಭಾಷೆ, ಸಾಹಿತ್ಯ, ಧರ್ಮದ ಆಧಾರದಲ್ಲಿ ಎಷ್ಟು ಇಸ್ಲಾಂ ನಿಂದ ಬೇರ್ಪಡಿಸಲು ಸಾಧ್ಯವೋ ಅವೆಲ್ಲವನ್ನೂ ಚೀನಾ ಹೊರ ಜಗತ್ತಿಗೆ ಹೆಚ್ಚು ಗೊತ್ತಾಗದಂತೆ ಅವ್ಯಾಹತವಾಗಿ ಮಾಡುತ್ತಲೇ ಇದೆ. ಅದರ ಭಾಗವೇ ಇತ್ತೀಚೆಗೆ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್, ನಮಾಜ್ ಮಾಡುವಾಗ ಬಳಕೆ ಮಾಡುವ ಮ್ಯಾಟನ್ನು ಪೊಲೀಸರಿಗೆ ಒಪ್ಪಿಸಲು ಒತ್ತಡ ಹೇರಿರುವುದು. ಒಂದು ಪ್ರಾಂತ್ಯದಲ್ಲಿ ಇರುವ ಒಂದೆರಡು ಮುಸ್ಲಿಂ ಸಮುದಾಯಗಳಿಗೇ ಚೀನಾ ಈ ಪಾಟಿ ತಲೆ ಬಿಸಿ ಮಾಡಿಕೊಂಡಿದೆ ಎಂದರೆ, ರಾಜ್ಯ ರಾಜ್ಯಗಳಲ್ಲೂ ಇರುವ ಕನಿಷ್ಠ 3-4 ಮುಸ್ಲಿಂ ಸಮುದಾಯಗಳಲ್ಲಿರುವ ರ್ಯಾಡಿಕಲ್ ಚಿಂತನೆ ಬಗ್ಗೆ ಭಾರತಕ್ಕೆ ಅದೆಷ್ಟು ತಲೆ ಬಿಸಿ ಇರಬಾರದು? ಚೀನಾವನ್ನು ಹೆಡ್ ಕ್ವಾರ್ಟ್ರಸ್ ಎಂದು ಪರಿಗಣಿಸುವ ಭಾರತೀಯ ಕಮ್ಮಿನಿಷ್ಠರು, ಚೀನಾದಲ್ಲಿ ನಡೆಯುತ್ತಿರುವ ಮುಸ್ಲಿಮರ ಶೋಷಣೆಯನ್ನು ಮರೆತು ಭಾರತದಲ್ಲಿ ಮುಸ್ಲಿಮರ ಭದ್ರತೆ ಬಗ್ಗೆ ಕರುಣಾಜಕವಾಗಿ ಮಾತನಾಡುತ್ತಾರೆ. ಕಾರಣವೇ ಇಲ್ಲದೇ ಕರುಣಾಜನಕವಾಗಿ ಮಾತನಾಡುವ ಕಾಮ್ರೆಡ್ ಗಳು ಇನ್ನಾದರು ತಮ್ಮ ಹೆಡ್ ಕ್ವಾರ್ಟ್ರಸ್ ನಲ್ಲಿ ನಡೆಯುತ್ತಿರುವ ಮುಸ್ಲಿಮರ ಶೋಷಣೆ ಬಗ್ಗೆ ಧ್ವನಿ ಎತ್ತಬೇಕಿದೆ. ಅವರಷ್ಟೇ ಅಲ್ಲ ವಿಶ್ವಸಮುದಾಯವೂ ಈ ಬಗ್ಗೆ ಚೀನಾವನ್ನು ಪ್ರಶ್ನಿಸಬೇಕಿದೆ. ಇಲ್ಲದೇ ಇದ್ದರೆ ಇತ್ತೀಚೆಗಷ್ಟೇ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಎದುರಿಸಿದಂತೆ ಮುಂದೊಂದು ದಿನ ಕ್ಸಿನ್ ಜಿಯಾಂಗ್ ನಿರಾಶ್ರಿತರ ಸಮಸ್ಯೆ ಎದುರಿಸಬೇಕಾಗಬಹುದೇನೋ ಏಕೆಂದರೆ ಈ ವಿಷಯದಲ್ಲಿ ಚೀನಾ ಎದುರಿಸುತ್ತಿರುವುದೂ ಸಹ ಜಗತ್ತು ಎದುರಿಸುತ್ತಿರುವ ಇಸ್ಲಾಮ್ ನ್ನೇ ಹೊರತು, ಬೇರೆಯದ್ದನ್ನಲ್ಲ.! 

Wednesday 15 February 2017

ಬಿಲ್ ಗೇಟ್ಸ್ ನ ಚುಚುಮದ್ದು ವಂಚನೆ ಜಾಲ ಬಯಲು, ಭಾರತದಿಂದ ಗೇಟ್ಸ್ ಫೌಂಡೇಷನ್ ಗೆ ಗೇಟ್ ಪಾಸ್


ಕ್ಯಾನ್ಸರ್ ನಿರೋಧಕದ ಹೆಸರಿನಲ್ಲಿ ಮಾನವ ಕುಲಕ್ಕೇ ಅಪಾಯಕಾರಿ ಚುಚ್ಚು ಮದ್ದು ಪ್ರಯೋಗ! 

ಬಿಲ್ ಗೇಟ್ಸ್ ನ ಚುಚುಮದ್ದು ವಂಚನೆ ಜಾಲ ಬಯಲು, ಭಾರತದಿಂದ ಗೇಟ್ಸ್ ಫೌಂಡೇಷನ್ ಗೆ ಗೇಟ್ ಪಾಸ್  

ಬಿಲ್ ಗೇಟ್ಸ್, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಮೂಲಕ ಗರ್ಭಕಂಠದ ಕ್ಯಾನ್ಸರ್ ನ್ನು ತಡೆಗಟ್ಟಲು ಲಸಿಕಾ ಅಭಿಯಾನವನ್ನು ಸಹ ಪ್ರಾರಂಭಿಸಿದ್ದ. ಈ ಮೂಲಕ  ಅಮೆರಿಕಾದ ಪಾಲಿಗೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಹೊರಟಿರುವ ಪರೋಪಕಾರಿ ಮಾನವೀಯ ವ್ಯಕ್ತಿಯಂತೆ ಕಾಣುತ್ತಿದ್ದ. ಆದರೆ ಬಿಲ್ ಗೇಟ್ಸ್ ಪ್ರಾರಂಭಿಸಿದ ಲಸಿಕಾ ಅಭಿಯಾನ, ಅಂತಾರಾಷ್ಟ್ರೀಯ ಮಟ್ಟದ ಔಷಧ ತಯಾರಿಕಾ ಸಂಸ್ಥೆಯೊಂದಿಗೆ ಸೇರಿ ಮಾರಕವಾಗುವ ಔಷಧ ಲಸಿಕೆಗಳನ್ನು ಪ್ರಮೋಟ್ ಮಾಡುತ್ತಿದ್ದದ್ದನ್ನು ಭಾರತ ಬಯಲು ಮಾಡಿದೆ.

ಇಮ್ಯೂನೈಸೇಷನ್ (ರೋಗ ನಿರೋಧಕ) ಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಲಹಾ ತಂಡ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ನೊಂದಿಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಿದೆ. ಯುವತಿಯರಿಗೆ ಎದುರಾಗಬಹುದಾದ ಗರ್ಭಕಂಟಕ ಕ್ಯಾನ್ಸರ್ ನ್ನು ತಡೆಗಟ್ಟಲು 2009-10 ನೇ ಸಾಲಿನಲ್ಲಿ ಇದೇ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿ, ಸಾವಿರಾರು ಯುವತಿಯರ ಮೇಲೆ ಪ್ರಯೋಗಿಸಿತ್ತು. ಆದರೆ ಈ ಲಸಿಕೆಯ ಅಸಲಿಯತ್ತು ಬೇರೆಯದ್ದೇ ಇದ್ದು, ಮಾರಕವಾದ ಲಸಿಕೆ ಎಂಬುದು ಈಗ ಬಯಲಾಗಿದೆ.

ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ನ ಅಭಿಯಾನದಲ್ಲಿ ಬಳಸಲಾಗುತ್ತಿದ್ದ ಮರ್ಕ್ &ಕೋ ಸಂಸ್ಥೆಯ  ಗ್ಲ್ಯಾಕ್ಸೊಸ್ಮಿತ್ಕ್ಲೈನ್ (GSK) ಮತ್ತು ಗಾರ್ಡಸಿಲ್ ಎಂಬ ಲಸಿಕೆಗಳನ್ನು ಮೇಲ್ನೋಟಕ್ಕೆ ಗರ್ಭಾಶಯಕ್ಕೆ ಸಂಬಂಧಿಸಿದ ಕ್ಯಾನ್ಸರ್ ನ್ನು ತಡೆಗಟ್ಟಲು ನೀಡಲಾಗುವ ಲಸಿಕೆಯ ಸೋಗಿನಲ್ಲಿ ಬಳಕೆ ಮಾಡಲಾಗಿದೆ. ಆದರೆ ಭಾರತೀಯ ಹೆಣ್ಣುಮಕ್ಕಳನ್ನು ಮಾನವ ಗಿನಿ ಪಿಗ್ಸ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಇದನ್ನು ಭಾರತೀಯ ಯುವತಿಯರ ಮೇಲೆ ಪ್ರಯೋಗಿಸಲು ಬಿಲ್ ಗೇಟ್ಸ್ ಫೌಂಡೇಷನ್ ನ್ನು ಅಂತಾರಾಷ್ಟ್ರೀಯ ಔಷಧ ಮಾಫಿಯಾ ನಡೆಸಿದ ಕುತಂತ್ರ ಎಂಬುದು ಲಸಿಕೆಯ ಹಿಂದಿರುವ ಅಸಲಿಯತ್ತು.

ಎರಡು ಲಸಿಕೆಗಳನ್ನು ಹಾಕಿಸಿಕೊಂಡ ಅನೇಕ ಯುವತಿಯರು ಘಾಸಿಗೊಂಡಿದ್ದರೆ, ನೂರಾರು ಜನರು ಸಾವನ್ನಪ್ಪಿರುವುದರ ಬಗ್ಗೆ ಪತ್ರಕರ್ತರ ತಂಡವೊಂದು ವರದಿ ಮಾಡಿದೆ. ಈ ಬಗ್ಗೆ ಮಾಹಿತಿ ಪಡೆದಿರುವ ಭಾರತೀಯ ಅಧಿಕಾರಿಗಳು ತಕ್ಷಣೆವೇ ಎಚ್ಚೆತ್ತುಕೊಂಡು ಗೇಟ್ಸ್ ಫೌಂಡೇಶನ್ ನ ಕರ್ಮಕಾಂಡದ ಬಗ್ಗೆ ತನಿಖೆಗೆ ಆದೇಶಿಸಿದ್ದು ಗಂಭೀರ ಅಪರಾಧ ಮಾಡಿರುವ ಗೇಟ್ಸ್ ಫೌಂಡೇಷನ್ ನ್ನು ಕೋರ್ಟ್ ಮುಂದೆ ತಂದು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ತಕ್ಷಣವೇ ಭಾರತದಿಂದ ಗೇಟ್ಸ್ ಫೌಂಡೇಷನ್ ಗೆ ಗೇಟ್ ಪಾಸ್ ನೀಡಲಾಗಿದೆ.

ಆರ್ಥಿಕ- ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಾರ ಪತ್ರಿಕೆಯೊಂದು ಬಿಲ್ ಗೇಟ್ಸ್ ಫೌಂಡೇಶನ್ ನ ವಂಚನೆಯನ್ನು ತನಿಖೆ ನಡೆಸಿದ್ದು, ಅಂತಾರಾಷ್ಟ್ರೀಯ ಔಷಧ ತಯಾರಿಕಾ ಸಂಸ್ಥೆಯ ಒತ್ತಡಕ್ಕೆ ಬಿಲ್ ಗೇಟ್ಸ್ ಫೌಂಡೇಶನ್ ಮಣಿದಿದ್ದು, ಲಸಿಕೆ ಅಭಿಯಾನದ ಹೆಸರಿನಲ್ಲಿ ಇದನ್ನು ಯುವತಿಯರ ಮೇಲೆ ಪ್ರಯೋಗಿಸಲಾಗಿದೆ.

ಮಾನವ ಕುಲದ ವಿರುದ್ಧ ಬಿಲ್ ಗೇಟ್ಸ್ ಘನಘೋರ ಅಪರಾಧ?

ಭಾರತದ ಹಲವಾರು ಎನ್ ಜಿಒ ಗಳು ಮಹಿಳಾ ಸಂಘಟನೆಗಳು ಸಹ ಈ ಬಗ್ಗೆ ಅಧಿಕಾರಿಗಳಿಗೆ ಸಾಕ್ಷ್ಯ ಸಹಿತ ಮಾಹಿತಿ ನೀಡಿದ್ದು, ಅಪಾಯಕಾರಿ ಚುಚ್ಚು ಮದ್ದು ನೀಡುವ ಮೂಲಕ ಬಿಲ್ ಗೇಟ್ಸ್ ಹಾಗೂ ಆತನ ಆಪ್ತರು  ಯುವತಿಯರ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿರುವುದರ ಬಗ್ಗೆ ತಿಳಿಸಿದ್ದಾರೆ.

ದಬ್ಬಾಳಿಕೆಯ ಭಾಗವಾಗಿ ಅಪಾಯಕಾರಿ ಚುಚ್ಚುಮದ್ದುಗಳನ್ನು ಸ್ವೀಕರಿಸುವುದೂ ಅಲ್ಲದೇ, ಜಗತ್ತಿನ ದುರ್ಬಲ ವರ್ಗದವರಿಗೆ ಸೇವೆ ಮಾಡುತ್ತಿರುವ ಸೋಗನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕಾಗಿ ಬಿಲ್ ಗೇಟ್ಸ್ ಫೌಂಡೇಷನ್ ಚುಚ್ಚು ಮದ್ದು ಪಡೆದ ಮಹಿಳೆಯರು, ಯುವತಿಯರಿಂದ ಫಿಂಗರ್ ಪ್ರಿಂಟ್ ನ್ನು ಪಡೆದು ಸರ್ಕಾರದ ಅಧಿಕಾರಿಗಳಿಗೆ ಸಲ್ಲಿಸಿದೆ. ಗೇಟ್ಸ್ ಫೌಂಡೇಶನ್ ನ ವಂಚನೆ ಬಹಿರಂಗಗೊಂಡ ಬೆನ್ನಲ್ಲೇ ಕೇಂದ್ರ  ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಗೆ ಬೀಗ ಜಡಿದಿದೆ ಎಂದು ಎಕಾನಾಮಿಕ್ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ
.

Sunday 27 November 2016

ವಿದ್ಯಾರಣ್ಯರು-ವೇದಾಂತ ದೇಶಿಕರು ಅದೈತ-ವಿಶಿಷ್ಠಾದ್ವೈತದ ಅಪೂರ್ವ ಸಂಗಮ



ನಾಥಮುನಿ ಪವಿತ್ರ ಗ್ರಂಥಗಳನ್ನು ಪುನಃ ಪಡೆದರೆ, ಅದನ್ನು ಯಮುನ ಮುನಿ ವ್ಯಾಪಕವಾಗಿ ಪ್ರತಿಪಾದಿಸಿದರು. ನಂತರ ಬಂದ ರಾಮಾನುಜಾಚಾರ್ಯರು ಅದನ್ನು ವ್ಯಾಖ್ಯಾನಿಸಿದರೆ ಆ ನಂತರದ ದಿನಗಳಲ್ಲಿ ವಿಜ್ಞಾನ ರೂಪದಲ್ಲಿ ಕ್ರಮಬದ್ಧಗೊಳಿಸುವುದಕ್ಕಾಗಿ ಅವುಗಳನ್ನು ವೇದಾಂತ ದೇಶಿಕರಿಗೆ ನೀಡಲಾಯಿತು. ಇದು 13ನೇ ಶತಮಾನದಲ್ಲಿದ್ದ ಶ್ರೀವೈಷ್ಣವ ಸಿದ್ಧಾಂತದ ಆಚಾರ್ಯ ವೇದಾಂತ ದೇಶಿಕರ ಬಗೆಗಿನ ವರ್ಣನೆ. ವೇದಾಂತ ದೇಶಿಕರು ಶ್ರೀವೈಷ್ಣವ ಆಚಾರ್ಯರಾಗಿದ್ದರೂ ಅವರ ಕವಿತ್ವ, ತರ್ಕ, ಭೋಧನೆಗಳನ್ನು ಜೀವಿಸುತ್ತಿದ್ದ ಜೀವನ ಕ್ರಮದಿಂದ ಅನೇಕ ಅದ್ವೈತ ತತ್ವದ ಅನುಯಾಯಿಗಳು ವೇದಾಂತ ದೇಶಿಕರನ್ನು ಅತ್ಯಂತ ಪೂಜನೀಯ ಭಾವನೆಯಿಂದ ಕಾಣುತ್ತಾರೆ. ಶ್ರೇಷ್ಠ ಅದ್ವೈತ ವಿದ್ವಾಂಸರಾಗಿದ್ದ ಅಪ್ಪಯ್ಯ ದೀಕ್ಷಿತರಂತೂ ವೇದಾಂತ ದೇಶಿಕರನ್ನು "ಕವಿ-ತಾರ್ಕಿಕ ಸಿಂಹಂ" (ಕವಿ- ತಾರ್ಕಿಕರ ನಡುವಿನ ಸಿಂಹ) ಅಂದರೆ ತರ್ಕಬದ್ದವಾಗಿ ವಾದ ಮಾಡುವುದರಲ್ಲಿ ಅವರನ್ನು ಮೀರಿಸಲು ಸಾಧ್ಯವಿರಲಿಲ್ಲ ಎಂದು ಬಣ್ಣಿಸಿ ನಮಿಸಿದ್ದಾರೆ.

ಅಪ್ಪಯ್ಯ ದೀಕ್ಷಿತರು ವೇದಾಂತ ದೇಶಿಕರ ಕವಿತ್ವ- ತರ್ಕದ ವಿದ್ವತ್ ಪ್ರೌಢಿಮೆಯನ್ನು ವರ್ಣನೆ ಮಾಡುತ್ತಾ ಹೀಗೆ ಹೇಳುತ್ತಾರೆ. "ಇತ್ಥಂ ವಿಚಿನ್ತ್ಯ ಸರ್ವತ್ರ ಭಾವಾಃ ಸಂತಿ ಪದೇ ಪದೇ ಕವಿ ತಾರ್ಕಿಕ ಸಿಂಹಸ್ಯ ಕಾವ್ಯೇಷು ಲಲಿತೇಷ್ವಪಿ". ಅಂದರೆ ವೇದಾಂತ ದೇಶಿಕರ ಅತ್ಯಂತ ಸರಳ ಹಾಗೂ ಮೃದು ರಚನೆಯ ಪ್ರತಿ ಹಂತದಲ್ಲೂ ಪ್ರತಿ ಪದಗಳಲ್ಲೂ ಕವಿತ್ವದ ಶ್ರೇಷ್ಠತೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು. ವೇದಾಂತ ದೇಶಿಕರು ಕೇವಲ ಕವಿತ್ವ-ತರ್ಕದ ವಿದ್ವತ್ತಿನ ಗಣಿಯಾಗಿರಲಿಲ್ಲ, ಅವರಲ್ಲಿ ಮಾನವ ಬುದ್ಧಿಶಕ್ತಿ ಪ್ರಜ್ಞೆಗೆ ತಿಳಿದ ಎಲ್ಲಾ ಕಲೆ-ವಿಜ್ಞಾನದ ಆಳವಾದ ಜ್ಞಾನದ ಬ್ರಹ್ಮಾಂಡವೇ ಇತ್ತು ಅದು ತಾತ್ವಿಕ ವೈಭವ, ನೈತಿಕ ಶ್ರೇಷ್ಠತೆ ಮತ್ತು ಸೌಂದರ್ಯದ ವೈಭವದಿಂದ ಕಂಗೊಳಿಸುತ್ತಿತ್ತು ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ಅದಕ್ಕಾಗಿಯೇ ಅವರನ್ನು ಸರ್ವತಂತ್ರ ಸ್ವತಂತ್ರ( ಎಲ್ಲಾ ಕಲೆಗಳ ನಿಪುಣ) ಎಂದು ಶ್ರೇಷ್ಠ ವಿದ್ವಾಂಸರು ಬಣ್ಣಿಸಿದ್ದಾರೆ.      

ವೇದಾಂತ ದೇಶಿಕರ ಒಂದು ವೈಶಿಷ್ಟ್ಯವೇನೆಂದರೆ ಅವರು ತಮ್ಮ ಕವಿತ್ವವನ್ನು ತತ್ವಜ್ಞಾನದಿಂದ ಶ್ರೀಮಂತಗೊಳಿಸಿದ್ದರು. ತತ್ವಶಾಸ್ತ್ರವನ್ನು ಕವಿತ್ವದಿಂದಲೂ ಅಲಂಕೃತಗೊಳಿಸಿದ್ದರು. ಅವರು ಬೋಧನೆಗಳನ್ನೇ ಜೀವಿಸುತ್ತಿದ್ದರು. ಗೃಹಸ್ಥರಾಗಿದ್ದರೂ ಸಂತಶ್ರೇಷ್ಠ, ಋಷಿತುಲ್ಯರಂತೆ ಜೀವಿಸಿದ್ದರು. ಮುಘಲರ ಆಕ್ರಮಣದಿಂದ ಸನಾತನ ಧರ್ಮವನ್ನು ರಕ್ಷಿಸುವುದಕ್ಕೆ ವಿಜಯನಗರ ಸಾಮ್ರಾಜ್ಯಸ್ಥಾಪನೆಗೆ ಯತಿಗಳಾಗಿ ಸನ್ಯಾಸಿಗಳಾಗಿ, ದೇವತಾ ಸದೃಷ್ಯ ಸಂತರಾಗಿ ವಿದ್ಯಾರಣ್ಯರು ಮಾರ್ಗದರ್ಶನ ನೀಡಿದ್ದರು. ವಿದ್ಯಾರಣ್ಯರ ಸಹಪಾಠಿಗಳಾಗಿದ್ದ ವೇದಾಂತ ದೇಶಿಕರೂ ಸಹ ವಿದ್ಯಾರಣ್ಯರಂತೆಯೇ ಸನಾತನ ಧರ್ಮದ ರಕ್ಷಣೆಯ ವಿಷಯದಲ್ಲಿ ಅವಿಸ್ಮರಣೀಯರಾಗಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಯಾವೆಲ್ಲಾ ಘಟನೆಗಳು ವಿದ್ಯಾರಣ್ಯರನ್ನು ಇನ್ನಿಲ್ಲದಂತೆ ಕಾಡಿದ್ದವೋ ಅಂಥಹದ್ದೇ ಘಟನೆಗಳು ವೇದಾಂತ ದೇಶಿಕರ ಜೀವನದಲ್ಲಿಯೂ ನಡೆದಿದೆ. ಸಿದ್ಧಾಂತದ ಕವಲು  ಯಾವುದಾದರೇನಂತೆ ಅವುಗಳೆಲ್ಲದಕ್ಕೂ ಬುಡವಾಗಿರುವ ಸನಾತನ ಧರ್ಮದ ಸಂಸ್ಥಾಪನೆಯೊಂದೇ ವಿದ್ಯಾರಣ್ಯರಿಗೂ ಅವರ ಸಹಪಾಠಿಗಳಾಗಿದ್ದ ವೇದಾಂತ ದೇಶಿಕರಿಗೂ ಇದ್ದ ಗುರಿಯಾಗಿತ್ತು. ವಿದ್ಯಾರಣ್ಯರು ಸನಾತನ ಧರ್ಮದ, ಆ ಧರ್ಮದ ಜ್ಞಾನವಾರಿಧಿಯಾಗಿದ ಗ್ರಂಥಗಳ ಏಳ್ಗೆಗೆ ಹೇಗೆ ಅವಿರತ ಶ್ರಮವಹಿಸಿದ್ದರೋ ಅವರ ಸಹಪಾಠಿಗಳಾಗಿದ್ದ ವೇದಾಂತರೂ ಸಹ ಹಾಗೆಯೇ ಇದ್ದರು, ವಿದ್ಯಾರಣ್ಯರಂತೆಯೇ ಶ್ರಮಿಸಿದ್ದರು. ಅದು 1327,  ದೆಹಲಿ ಸುಲ್ತಾನನ ಸೇನಾಪತಿಯಾಗಿದ್ದ ಮಲಿಕ್ ಕಾಫರ್ ಶ್ರೀರಂಗಂ ಮೇಲೆ ಆಕ್ರಮಣ ಮಾಡುತ್ತಾನೆ. ಶ್ರೀರಂಗಂ ನಲ್ಲಿದ್ದ ಶ್ರೀವೈಷ್ಣವರು ಸ್ವಭಾವತಃ ಸಾತ್ವಿಕರು. ಮುಸಲ್ಮಾನರ ದಾಳಿಯಿಂದಾಗಿ ದೇವಾಲಯ, ವಿಗ್ರಹಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಯಾವ ಸಾಧ್ಯತೆಗಳೂ ಇರಲಿಲ್ಲ. ದಾಳಿಯಿಂದ ದೇವಾಲಯಕ್ಕೆ ಉಂಟಾಗುವ ಹಾನಿಯನ್ನು ತಡೆಯಲು ಸುದರ್ಶನ ಭಟ್ಟಾರ್ ನೇತೃತ್ವದಲ್ಲಿ ದೇವಾಲಯಗಳಲ್ಲಿದ್ದ ಉತ್ಸವ ಮೂರ್ತಿಗಳನ್ನು ಹೊತ್ತು ಸುರಕ್ಷಿತ ಪ್ರದೇಶಗಳಿಗೆ ಹೊರಡುವುದಕ್ಕೆ ಅಲ್ಲಿನ ಆಚಾರ್ಯರುಗಳು ನಿರ್ಧರಿಸುತ್ತಾರೆ ಅಂತೆಯೇ ಪಿಳ್ಳೈ ಲೋಕಾಚಾರ್ಯರರೆಂಬ ಹಿರಿಯರ ನೇತೃತ್ವದ ಗುಂಪೊಂದು ಉತ್ಸವ ಮೂರ್ತಿಯನ್ನು ಹೊತ್ತು ತಿರುಪತಿಗೆ ಹೊರಡುವುದಕ್ಕೆ ಸಿದ್ಧವಾಗುತ್ತದೆ. ಮತ್ತೊಂದಷ್ಟು ಜನರ ತಂಡ ದೇವಾಲಯದಲ್ಲಿರುವ ವಿಗ್ರಹ ಮುಘಲ ದೊರೆಗಳ ಕಣ್ಣಿಗೆ ಬೀಳದಂತೆ ಮಾಡಲು ದೇವಾಲಯದ ಮೂಲವರದ ಎದುರು ಕಲ್ಲಿನ ಗೋಡೆ ಕಟ್ಟಲು ಮುಂದಾಗುತ್ತದೆ. ಆ ಸಂದರ್ಭದಲ್ಲಿ ವೇದಾಂತ ದೇಶಿಕರೂ ಸಹ ಶ್ರೀರಂಗಂ ನಲ್ಲೇ ಇದ್ದರು. ದೇವಾಲಯದ ರಕ್ಷಣೆಗಾಗಿ ಜೀವವನ್ನೂ ಪಣಕ್ಕಿಟ್ಟು ಹೋರಾಡಿದ್ದರು. ಸುದರ್ಶನ ಭಟ್ಟಾರ್ ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಸೂತ್ರ ಪ್ರಕಾಶಿಕ ಎಂಬ ಗ್ರಂಥದ ಹಸ್ತಪ್ರತಿಗಳನ್ನು ಹೊತ್ತು ಕರ್ನಾಟಕದ ಸತ್ಯಮಂಗಲಂ ನಿಂದ ತಿರುನಾರಾಯಣಪುರಂ ನತ್ತ ಪ್ರಯಾಣ ಬೆಳೆಸಲು ಸಿದ್ಧರಾಗುತ್ತಾರೆ. ಆದರೆ ಆ ವೇಳೆಗೆ ಆಗಲೇ ಮುಘಲರು ರಕ್ಕಸರಂತೆ ಮೇಲರಗುತ್ತಾರೆ. ವೇದಾಂತ ದೇಶಿಕರ ಜೊತೆಗಿದ್ದ ಹಲವರನ್ನು ಪ್ರಾಣಿಗಳಂತೆ ತರಿದುಹಾಕುತ್ತಾರೆ. ಪ್ರಾಣ ಹೋಗುವ ಅಪಾಯವನ್ನು ಎದುರಿಸುತ್ತಿದ್ದ ವೇದಾಂತ ದೇಶಿಕರು ತಮ್ಮವರ ಹೆಣಗಳ ಮಧ್ಯದಲ್ಲೇ ಅವಿತು ಮುಘಲರ ಮತಾಂಧ ಕಣ್ಣಿನಿಂದ ತಪ್ಪಿಸಿಕೊಂಡು ತಿರುನಾರಾಯಣಪುರಂ( ಇಂದಿನ ಮೇಲುಕೋಟೆ) ಗೆ ಪ್ರಯಾಣ ಬೆಳೆಸುತ್ತಾರೆ. ಶ್ರೀರಂಗಂನ ಇತಿಹಾಸದ ವೈಭವದ ಆರಾಧನೆಯನ್ನು ಮರುಕಳಿಸುವಂತೆ ಪ್ರಾರ್ಥಿಸಿ ವೇದಾಂತ ದೇಶಿಕರು ಪ್ರಸಿದ್ಧ ಅಭೀತಿ ಸ್ತವ ಎಂಬ ಸ್ತೋತ್ರವನ್ನು ಬರೆದದ್ದು ಇದೇ ಸಂದರ್ಭದಲ್ಲೇ. ವೇದಾಂತ ದೇಶಿಕರು ಶ್ರೀರಂಗಂ ನಲ್ಲಿ ಪುನಃ ಹಳೆಯ ವೈಭವವನ್ನು ಮರುಕಳಿಸುವಂತೆ ಪ್ರಾರ್ಥಿಸಿ ಕೇವಲ ಅಭೀತಿ ಸ್ಥಾವಂ ಎಂಬ ಶ್ಲೋಕಗಳ ಗುಚ್ಛವನ್ನು ಬರೆದು ಅದು ನನಸಾಗುವುದಕ್ಕೆ ಸತತ 12 ವರ್ಷಗಳು ಕಾಯುತ್ತಾರೆ. ಇಂದಿನ ಮೇಲುಕೋಟೆಯಾಗಿರುವ ತಿರುನಾರಾಯಣಪುರಂನ ಸತ್ಯಕಾಲಂ ಎಂಬ ಗ್ರಾಮದಲ್ಲಿ ವೇದಾಂತ ದೇಶಿಕರು ಬದುಕಿದ್ದ 12 ವರ್ಷ ಅವರಿಗೆ ನೆರಳು ನೀಡಿದ್ದ ಅಶ್ವತ್ಥ ಮರವನ್ನೂ ಈಗಲೂ ನಾವು ನೋಡಬಹುದಾಗಿದೆ. ವೇದಾಂತ ದೇಶಿಕರು ಶ್ರೀರಂಗಂ ನ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾದು ಕುಳುತುಕೊಳ್ಳುತ್ತಿದ್ದ ಕಲ್ಲಿನ ಚಪ್ಪಡಿಯನ್ನು ಗ್ರಾಮದ ವಾದಿರಾಜ ದೇವಾಲಯದಲ್ಲಿ ಇಂದಿಗೂ ಸಂರಕ್ಷಿಸಲ್ಪಟ್ಟಿದೆ. ಅಷ್ಟೇ ಅಲ್ಲದೇ, ಶ್ರೀರಂಗಂ ನಲ್ಲಿ ದೇವರ ವಿಗ್ರಹ ಪುನಃ ಪ್ರತಿಷ್ಠಾಪನೆಯಾಗಿ ಮತ್ತೆ ಹಳೆಯ ಆಚರಣೆಗಳು ಪ್ರಾರಂಭವಾದವು ಎಂಬ ಸುದ್ದಿಯನ್ನು ಕೇಳಲು ತುದಿಗಾಲಲ್ಲಿ ನಿಂತಿರುವಂತೆ ಆಚಾರ್ಯರ ಚಿತ್ರವನ್ನು ಕಾಣಬಹುದಾಗಿದೆ.

ಬಲವಂತವಾಗಿ ಮತಾಂತರಗೊಂಡವರನ್ನು ಪುನಃ ಸನಾತನ ಧರ್ಮಕ್ಕೆ ವಾಪಸ್ ಕರೆದುಕೊಂಡು ಬಂದು ಕ್ಷತ್ರಿಯರಲ್ಲದ ಯುವಕರಿಗೆ ವಿಜಯನಗರ ಸಾಮ್ರಾಜ್ಯದ ಪಟ್ಟಕಟ್ಟಿ ಸನಾತನ ಧರ್ಮದ ನಿಜವಾದ ಮೌಲ್ಯಗಳನ್ನು ವಿದ್ಯಾರಣ್ಯರು ಹೇಗೆ ಎತ್ತಿ ಹಿಡಿದಿದ್ದರೂ, ವೇದಾಂತ ದೇಶಿಕರೂ ಸಹ ಸನಾತನ ಧರ್ಮದ ನಿಜವಾದ ಮೌಲ್ಯಗಳನ್ನು ಆಚರಣೆಯಲ್ಲಿ ಜಾರಿಗೆ ತಂದವರು. ವೇದಾಂತ ದೇಶಿಕರು ತಿರುನಾರಾಯಣಪುರಂ (ಮೇಲುಕೋಟೆ)ಗೆ ತೆರಳಿದ 12 ವರ್ಷಗಳ ಬಳಿಕ ಶ್ರೀರಂಗಂ ನಲ್ಲಿ ಪರಿಸ್ಥಿತಿ ಸುಧಾರಿಸಿ ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನೆ, ಆಚರಣೆಗಳಲ್ಲೆವೂ ಹಿಂದಿನಂತೆಯೇ ನಡೆಯಲು ಪ್ರಾರಂಭವಾಗುತ್ತದೆ. ಈ ವೇಳೆ ದೇವಾಲಯದಲ್ಲಿ ಭಗವಂತನ ದಿವ್ಯ ಮಹಿಮೆ ವಿಶೇಷಗಳನ್ನು ಕೊಂಡಾಡುವ ದಿವ್ಯ ಪ್ರಬಂಧಂ ನ್ನು ಪಠಿಸುವುದಕ್ಕೆ ಮಡಿವಂತರಿಂದ ಅಡ್ಡಿ ಉಂಟಾಗುತ್ತದೆ. ಅದರಲ್ಲಿ ಬ್ರಾಹ್ಮಣೇತರ ಆಳ್ವಾರುಗಳಿಂದ ದ್ರಾವಿಡ ಭಾಷೆಯಲ್ಲಿ ರಚಿಸಲ್ಪಟ್ಟಿದ್ದನ್ನೂ ಸೇರಿಸಲಾಗಿದೆ ಹಾಗೂ ಅಲ್ಲಿನ ಮಡಿವಂತರಿಗೆ ನಿಷಿದ್ಧವಾಗಿದ್ದ ಕಾಮನೆಗಳೊಂದಿಗೆ ವ್ಯವಹರಿಸುತ್ತವೆ ಎಂಬುದು ಪ್ರಧಾನ ಕಾರಣವಾಗಿತ್ತು. ಆದರೆ ಧರ್ಮವೇ ದೇಹಧರಿಸಿದಂತಿದ್ದ ವೇದಾಂತ ದೇಶಿಕರು ಮಡಿವಂತರೊಂದಿಗೆ ವಾದಿಸಿ ದಿವ್ಯ ಪ್ರಬಂಧಂ ವೇದಗಳಿಗೆ ಸರಿಸಮನಾದದ್ದು ಎಂದು ಮನವರಿಕೆ ಮಾಡಿಕೊಡುತ್ತಾರೆ. ಅಂದಿನಿಂದ ಭಾಷೆಯನ್ನೇ ಪ್ರಧಾನವಾಗಿಸದೇ, ಬ್ರಾಹ್ಮಣೇತರರು ರಚಿಸಿದ್ದೆಂಬ ಬೇಧವಿಲ್ಲದೇ ದೇವರ ಸನ್ನಿಧಿಯಲ್ಲಿ ದಿವ್ಯ ಪ್ರಬಂಧದ ಪಠಣ ಸಾಗಿದೆ. ಅಷ್ಟೇ ಅಲ್ಲ, ಉತ್ಸವಾಚರಣೆಗಳಲ್ಲಿ ಆಳ್ವಾರ್ ರನ್ನು ಗೌರವಿಸುವ ಅಧ್ಯಯನ ಉತ್ಸವದ ಅಭ್ಯಾಸವನ್ನು ಮರು ಸ್ಥಾಪಿಸಿದ್ದೂ ಸಹ ಇದೇ ವೇದಾಂತ ದೇಶಿಕರೇ. ವೇದಾಂತ ದೇಶಿಕರ ತರ್ಕ ನಿರ್ಣಯದ ವಿದ್ವತ್ ಗೆ ವಿದ್ಯಾರಣ್ಯರು ಹಾಗೂ ದ್ವೈತಿಗಳಾಗಿದ್ದ ಅಕ್ಷೋಭ್ಯರು ಸಾಕ್ಷಿಯಾಗಿ ನಿಲ್ಲುತ್ತಾರೆ. ವಿದ್ಯಾರಣ್ಯರು ಹಾಗೂ ಅಕ್ಷೋಭ್ಯರ ನಡುವೆ ನಡೆದ ತರ್ಕದ ನಿರ್ಣಯಕ್ಕೆ ವೇದಾಂತ ದೇಶಿಕರೇ ನಿಲ್ಲುತ್ತಾರೆ. ಇಬ್ಬರ ವಾದಗಳನ್ನು ಆಲಿಸಿದ ನಂತರ ವಿದ್ಯಾರಣ್ಯರು ತಮ್ಮ ಬಾಲ್ಯದ ಗೆಳೆಯನಾಗಿದ್ದರೂ ಪ್ರಮಾಣಗಳನ್ನು ಆಧರಿಸಿ ಅಕ್ಷೋಭ್ಯರದ್ದೇ ಸರಿಯಾದ ವಾದ ಎಂಬ ನಿರ್ಣಯಕ್ಕೆ ಬಂದು ವಿವಾದವನ್ನು ಬಗೆಹರಿಸುತ್ತಾರೆ ವೇದಾಂತ ದೇಶಿಕರು.

ಇತ್ತ ಶ್ರೀರಂಗಕ್ಕೆ ಮೊದಲಿನ ಕಳೆ ಬಂದು ಭಕ್ತ ಸಮೂಹ  ಮತ್ತೆ ಮೊದಲಿನಂತೆ ದೇವರ ಸೇವೆಯಲ್ಲಿ ತೊಡಗುವ ವೇಳೆಗೆ ವೇದಾಂತದೇಶಿಕರಿಗೆ ತೊಂಬತ್ತೈದು ವರ್ಷ ವಯಸ್ಸು. ಶ್ರೀರಂಗನಾಥನ ಸೇವೆಯಲ್ಲೇ ನಿರತರಾದ ವೇದಾಂತ ದೇಶಿಕರು ಇಳಿವಯಸ್ಸಿನಲ್ಲಿಯೂ ಹಿರಿಯ ಜ್ಞಾನಿಗಳ ಗ್ರಂಥಗಳನ್ನು, ಉಪದೇಶಗಳನ್ನು ಜನರಿಗೆ ವಿವರಿಸಿ ಹೇಳುತ್ತಿದ್ದರು. ದೇವಾಲಯದಲ್ಲಿ ಉತ್ಸವಗಳು ಸಾಂಗವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು. ಆಗ ಆಚಾರ್ಯರು ಬರೆದ ಶ್ರೇಷ್ಠವಾದ ಕೃತಿ ‘ರಹಸ್ಯತ್ರಯಸಾರ. ಇಷ್ಟೆಲ್ಲಾ ಮಾಡಿದ ವೇದಾಂತ ದೇಶಿಕರು ತಮ್ಮದೇ ಸಿದ್ಧಾಂತದ ಅನುಯಾಯಿಗಳಿಂದ ಸಮಸ್ಯೆಗಳನ್ನೂ ಎದುರಿಸಬೇಕಾಗಿ ಬಂತು.  ವೇದಾಂತ ದೇಶಿಕರಿಗೆ ಬಹಳ ಪ್ರಿಯವಾದ ಶ್ರೀರಂಗದಲ್ಲಿ ಅವರನ್ನು ಆಚಾರ್ಯಪೀಠಕ್ಕೆ ನೇಮಿಸಲಾಯಿತು. ಡಿಂಡಿಮ ಹಾಗೂ ಕೃಷ್ಣಮಿಶ್ರ ಎಂಬ ಕವಿಗಳನ್ನು ವಾದದಲ್ಲಿ ಜಯಿಸಿದ ದೇಶಿಕರಿಗೆ ಶ್ರೀರಂಗನಾಥನ ಸಮ್ಮುಖದಲ್ಲಿ ‘ಸರ್ವತಂತ್ರ ಸ್ವತಂತ್ರ’, ‘ಕವಿತಾರ್ಕಿಕ ಕೇಸರೀ’ ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಯಿತು. ಶಂಕರರನ್ನು ಕಂಡು ಅನೇಕರಿಗೆ ಅಸೂಯೆ ಉಂಟಾದಂತೆಯೇ ವೇದಾಂತ ದೇಶಿಕರ  ಇವರ ಪಾಂಡಿತ್ಯ, ವೈರಾಗ್ಯ ಮತ್ತು ವಿನಯಗಳನ್ನು ಕಂಡು ಅನೇಕರಿಗೆ ಇವರ ಮೇಲೆ ಅಸೂಯೆ ಉಂಟಾಯಿತು, ದೇಶಿಕರ ಸಹನೆ ಹೆಚ್ಚಿದಷ್ಟೂ ಅವರೊಂದಿಗೆ ಇದ್ದವರ ಅಸೂಯೆ ಹೆಚ್ಚಾಗತೊಡಗಿತ್ತು. ದೇಶಿಕರನ್ನು ವಾದದಲ್ಲಿ ಸೋಲಿಸಬೇಕೆಂದು ಪಟ್ಟುಹಿಡಿದ ಶ್ರೀವೈಷ್ಣವರೇ ಕೆಲವರು ಆಚಾರ್ಯರನ್ನು ವಾದಕ್ಕೆ ಕರೆದರು. ‘‘ನಮ್ಮನಮ್ಮಲ್ಲಿ ವಾದವೇಕೆ? ನಾನು ವಾದಕ್ಕೆ ಸಿದ್ಧನಿಲ್ಲ’’ ಎಂದುಬಿಟ್ಟರು ದೇಶಿಕರು. ದೇಶಿಕರಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ದೇಶಿಕರ ಮನೆಯ ಬಾಗಿಲಿಗೆ ಪಾದರಕ್ಷೆಗಳ ತೋರಣವನ್ನು ಅವರು ಕಟ್ಟಿದರು. ಆದರೆ ದೇಶಿಕರು ಸಹನಾಮೂರ್ತಿಗಳು, ಅವರು ಕೋಪಿಸಿಕೊಳ್ಳಲಿಲ್ಲ. ಬದಲಾಗಿ ನಾವು ಒಬ್ಬೊಬ್ಬರು ಒಂದೊಂದನ್ನು ಅನುಸರಿಸುತ್ತಾರೆ, ಕೆಲವರು ಕರ್ಮವನ್ನಾದರೆ ಮತ್ತೆ ಕೆಲವರು ಜ್ಞಾನವನ್ನು ಅನುಸರಿಸುತ್ತಾರೆ. ನಾವು ಹರಿದಾಸರ ಪಾದರಕ್ಷೆಗಳನ್ನು ಅನುಸರಿಸುತ್ತೇವೆ ಎಂದರು, ಕೊನೆಗೆ ಅಸೂಯೆಪಡುವ ಜನರ ಕಿರುಕುಳಕ್ಕೆ ಬೇಸತ್ತು ಶ್ರೀರಂಗದಿಂದ ಹೊರನಡೆದರು. ವೇದಾಂತ ದೇಶಿಕರು ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲೇನು ಇರಲಿಲ್ಲ. ಬೋಧಿಸಿದಂತೆ ಜೀವಿಸಿದವರು ಸಂತ ಸದೃಷ್ಯರಾದವರಾದರೂ ಗೃಹಸ್ಥರಾಗಿದ್ದವರು. ಇತ್ತ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಬಾಲ್ಯದ ಸ್ನೇಹಿತ, ಸಹಪಾಠಿ ವೇದಾಂತ ದೇಶಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶಿಕರನ್ನು ಆಸ್ಥಾನಕ್ಕೆ ಕರೆಸಿಕೊಳ್ಳಲು ಯತ್ನಿಸಿದರು. ಆದರೆ ಪರಮ ವೈರಾಗಿಗಳಾಗಿದ್ದ ವೇದಾಂತ ದೇಶಿಕರು ವಿದ್ಯಾರಣ್ಯರಿಗೆ ’ವೈರಾಗ್ಯ ಪಂಚಕ’ವನ್ನೊಳಗೊಂಡ ಪತ್ರವನ್ನು ಬರೆದು ವಿನಮ್ರವಾಗಿಯೇ ವಿದ್ಯಾರಣ್ಯರ ಆಹ್ವಾವನ್ನು ನಿರಾಕರಿಸಿದರು.  ಇಂದು ಮಠಗಳು, ಸಂತರ ನಡುವೆ ನಡೆಯುತ್ತಿರುವ ಪೈಪೋಟಿ, ಧರ್ಮ ರಕ್ಷಣೆಯನ್ನು ನೆನಪಿಸಿಕೊಂಡಾಗ ಇಬ್ಬರು ಮಹಾನ್ ಯೋಗಿಗಳಾಗಿದ್ದ ವಿದ್ಯಾರಣ್ಯರ- ವೇದಾಂತ ದೇಶಿಕರ ಸ್ನೇಹ ಆದರ್ಶವಾಗಿ ನಮ್ಮೆದುರು ನಿಲ್ಲುತ್ತದೆ. ಸಾಮ್ರಾಜ್ಯವೊಂದರ ರಾಜಗುರುವಾಗಿದ್ದ ಸ್ನೇಹಿತ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡುತ್ತೇನೆಂದು ಮುಂದೆ ಬಂದಾಗಲೂ ನಮ್ರತೆಯಿಂದ ನಿರಾಕರಿಸಿದ ವೇದಾಂತ ದೇಶಿಕರ ನಿಸ್ಪೃಹತೆ  ಸಂತರಿಗೆ ಸಾರ್ವಕಾಲಿಕ ಮೇಲ್ಪಂಕ್ತಿಯಾಗಿ ನಿಲ್ಲುತ್ತದೆ.